ದಾವಣಗೆರೆ:
ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಕಮಲ್ ಪಂಥ್ ತಿಳಿಸಿದ್ದಾರೆ.
ನಗರದ ಎಸ್‍ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯದ ವಿವಿಧೆಡೆ ಇರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಂಗ್ಲಾದ ನುಸುಳುಕೋರರು ದಾವಣಗೆರೆಯ ಕೆಲ ಮಿಲ್, ಕಾರ್ಖಾನೆ ಸೇರಿದಂತೆ ವಿವಿಧೆಡೆ ಹರಡಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಕ್ರಮ ವಲಸಿಗರು ಎಲ್ಲಿಯೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.
ಪೊಲೀಸ್ ಇಲಾಖೆಯಲ್ಲಿ 23 ಸಾವಿರ ಹುದ್ದೆಗಳು ಖಾಲಿ ಇದ್ದು, ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆ ತೊಡಗಿದೆ. ಪೊಲೀಸ್ ಸಿಬ್ಬಂದಿ ಟೊಪ್ಪಿಗೆ ಬದಲಿಸುವ ವಿಚಾರ ನಮ್ಮ ಮುಂದಿಲ್ಲ. ಸಹಜವಾಗಿಯೇ ಈ ಬಗ್ಗೆ ಚರ್ಚೆ ನಡೆದಿತ್ತಷ್ಟೇ. ಸಾರ್ವಜನಿಕರೊಂದಿಗೆ ಸನ್ನಡತೆ ತೋರುವಂತೆ, ಗೌರವದಿಂದ ಮಾತನಾಡುವಂತೆ ಸಿಬ್ಬಂದಿಗೆ ತರಬೇತಿ ನೀಡಲು ಇಲಾಖೆ ಗಮನ ಹರಿಸಲಾಗಿದೆ ಎಂದು ಹೇಳಿದರು.
ವಾಟ್ಸಪ್‍ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಗಣೇಶ್ ಉತ್ಸವ ಸೇರಿದಂತೆ ಯಾವುದೇ ಸಂದರ್ಭಗಳಲ್ಲೂ ಪ್ರಚೋಧನಕಾರಿಯಾಗಿ ಮೆಸೇಜ್ ಕಳುಹಿಸುವವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗುವುದು. ಈ ಸಂಬಂಧ ಪ್ರತಿಯೊಂದು ವಾಟ್ಸ್‍ಪ್ ಗ್ರೂಪ್‍ಗಳ ಮೇಲೆ ಇಲಾಖೆ ನಿಗಾವಹಿಸಿದೆ ಎಂದರು.
ಸಾರ್ವಜನಿಕರೊಂದಿಗೆ ಇಲಾಖೆಯ ಸಿಬ್ಬಂದಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ತರಬೇತಿ ನೀಡುವ ಕೆಲಸವನ್ನು ಮತ್ತೆ ಆರಂಭಿಸಲಾಗುವುದು. ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಗಣೇಶ ಚತುರ್ಥಿ ಮುಗಿದ ಕೂಡಲೇ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್. ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.