ಚಿತ್ರದುರ್ಗ:
ಚಳ್ಳಕೆರೆ ತಾಲೂಕು ವೇದಾವತಿ ನದಿಯ ದಡದಲ್ಲಿ ಬರುವ ತೊರೆಬೀರನಹಳ್ಳಿ, ಕಲಮರಹಳ್ಳಿ, ಮೈಲನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ಬಿದರಕೆರೆ, ಹೊಸಹಳ್ಳಿಗಳಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮರಳು ಗುತ್ತಿಗೆದಾರರು ನಿಯಮವನ್ನು ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆದು ದೊಡ್ಡ ದೊಡ್ಡ ನಗರಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ವೇದಾವತಿ ನದಿಯ ಪಕ್ಕದಲ್ಲಿ ಬರುವ ನೂರಾರು ಗ್ರಾಮಗಳ ರೈತರು ಹಾಗೂ ಜನಸಾಮಾನ್ಯರು ವೇದಾವತಿ ನದಿಯ ನೀರನ್ನೆ ನೆಚ್ಚಿ ಬದುಕುತ್ತಿದ್ದಾರೆ. ಪ್ರತಿ ವರ್ಷವೂ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆಯಲ್ಲಿ ಯಾವುದೇ ನದಿಗಳು ಹರಿಯುವುದಿಲ್ಲ.
ಕೆರೆಗಳು ಭರ್ತಿಯಾಗುವುದಿಲ್ಲ. ಇಂತಹ ಭೀಕರ ಪರಿಸ್ಥಿತಿಯಲ್ಲಿ ವೇದಾವತಿ ನದಿಯ ತಪ್ಪಲಲ್ಲಿ ಮರಳನ್ನು ತೆಗೆದರೆ ನೀರು ನಿಲ್ಲುವುದಾದರೂ ಹೇಗೆ ಎಂದು ಪ್ರಶ್ನಿಸಿದ ರೈತರು ಈ ಕೂಡಲೆ ಟೆಂಡರ್‍ಗಳನ್ನು ರದ್ದುಪಡಿಸಿ ವೇದಾವತಿ ನದಿಯಲ್ಲಿನ ಮರಳನ್ನು ಉಳಿಸಿ ಅನ್ನದಾತ ರೈತ ಹಾಗೂ ಜನಜಾನುವಾರುಗಳನ್ನು ಕಾಪಾಡುವಂತೆ ಮನವಿ ಮಾಡಿದರು
ಗುತ್ತಿಗೆದಾರರು ಟೆಂಡರ್ ನೆಪದಲ್ಲಿ ಪ್ರತಿನಿತ್ಯವೂ ರಾತ್ರಿ ವೇಳೆ 50 ರಿಂದ 60 ಲಾರಿ ಲೋಡ್‍ಗಳಷ್ಟು ಮರಳನ್ನು ಬೆಂಗಳೂರಿಗೆ ಮಾರಾಟ ಮಾಡುತ್ತಿದ್ದಾರೆ. ನದಿಯ ಮರಳನ್ನು ರಕ್ಷಿಸಲು ಹೋದ ರೈತರ ಮೇಲೆ ಪೊಲೀಸರನ್ನು ಬಿಟ್ಟು ಹೆದುರಿಸುತ್ತಿದ್ದಾರೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಮರಳು ಲೂಟಿಕೋರರನ್ನು ಮಟ್ಟಾ ಹಾಕಬೇಕೆಂದು ರೈತರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಆರ್.ಎ.ದಯಾನಂದಮೂರ್ತಿ , ಟಿ.ಹಂಪಣ್ಣ, ಕೆ.ಸಿ.ಹೊರಕೇರಪ್ಪ, ಬಿ.ಓ.ಶಿವಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.