ಚಿತ್ರದುರ್ಗ:
ಕನ್ನಡ ಹೆಗಲ ಮೇಲೆ ಇಂಗ್ಲಿಷ್ ಸವಾರಿ ಮಾಡುತ್ತಿರುವುದರಿಂದ ಕನ್ನಡ ಭಾಷೆ ಹೆಚ್ಚು ಸದೃಢವಾಗಬೇಕಾದರೆ ಶಾಸ್ತ್ರೀಯವಾಗಿ ಕನ್ನಡವನ್ನು ಬಳಸಬೇಕು. ಎಂದು ಹಿರಿಯ ವಿದ್ವಾಂಸರು ಹಾಗೂ ಸಾಹಿತಿ ಶಿವಮೊಗ್ಗದ ಪ್ರೊ.ಶ್ರೀಕಂಠ ಕೂಡಿಗೆ ಹೇಳಿದರು.ಮದಕರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾಸ್ಯ ಸಾಹಿತಿ ಬಿ.ತಿಪ್ಪೇರುದ್ರಪ್ಪ ವೇದಿಕೆಯಲ್ಲಿ ಶನಿವಾರ ನಡೆದ ನಾಲ್ಕನೆ ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ವಿಶ್ವವಿದ್ಯಾಲಯವೇ ಇಲ್ಲದ ಕಾಲದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರು ಸ್ವಾಭಿಮಾನದಿಂದ ಬದುಕಿ ದೇವರಿಗಿಂತ ಕಾಯಕ ಪ್ರಧಾನವಾದುದು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಶಿಕ್ಷಣ ದೇಶಕ್ಕೆ ಬೆಳಕಾಗಲಿಲ್ಲ. ಅನಕ್ಷರಸ್ಥ ಜಾತಿವಾದಿ ಈಗ ಅಕ್ಷರಸ್ಥ ಜಾತಿವಾದಿಗಳಾಗಿರುವುದನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯನ್ನು ದೇಶದಲ್ಲಿ ಕಾಣಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.
ಪದವೀಧರರು ಜಾತಿಯನ್ನು ಬೆಳೆಸುವ ವಾರಸುದಾರಿಕೆಯನ್ನು ಪಡೆದಿದ್ದಾರೆ. ಅನಕ್ಷರಸ್ಥ ಜಾತಿವಾಗಿಗಳಿಗಿಂತಲು ಅಕ್ಷರಸ್ಥ ಜಾತಿವಾದಿಗಳಿಂದ ದೇಶಕ್ಕೆ ಹೆಚ್ಚು ಅಪಾಯ ಕಾದಿದೆ. ಅಕ್ಷರಸ್ಥರೇ ಹೆಚ್ಚು ಮೂಢನಂಬಿಕೆಯನ್ನು ಆಚರಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಪುರೋಹಿತ್ಯ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಕೋಮುವಾದ ರಾಜಕಾರಣಕ್ಕೆ ಬೇಕಾಗುವ ಮನುವಾದ ಪುನಶ್ಚೇತನ ಅಕ್ಷರಸ್ಥ ಕೋಮುವಾದಿಗಳು ವಿಜೃಂಭಿಸುತ್ತಿದ್ದಾರೆ.
ಸಮಾಜದಲ್ಲಿ ಮೊದಲು ಬದಲಾವಣೆಯೇ ಬೀಜವನ್ನು ನಾವುಗಳೆ ಬಿತ್ತಬೇಕು. ಕನ್ನಡ ಕನ್ನಡ ಎನ್ನುವವರು ಸಹಿ ಮಾಡುವುದು ಇಂಗ್ಲಿಷ್‍ನಲ್ಲಿ. ಕನ್ನಡ ಅಂಕಿಗಳನ್ನು ಬರೆಯುವವರೆ ತುಂಬಾ ವಿರಳ. ಕನ್ನಡ ಅಂಕಿಗಳನ್ನು ಬರೆಯಲು ಓದಲು ಬರದ ಬಹಳಷ್ಟು ಮಂದಿ ನಾವು ಕನ್ನಡಿಗರೆಂದು ಎದೆಬೀಗುತ್ತಿದ್ದಾರೆ.
ಕನ್ನಡದ ನಾಮಫಲಕಗಳನ್ನು ಉಳಿಸಿಕೊಳ್ಳಲು ಆಗದಂತ ಪರಿಸ್ಥಿತಿಯಲ್ಲಿದ್ದೇವೆ. ಸ್ಮಾರ್ಟ್ ಫೋನ್, ವಾಟ್ಸ್‍ಪ್, ಕಂಪ್ಯೂಟರ್‍ಗಳು ಬಂದ ಮೇಲಂತೂ ಪತ್ರ ವ್ಯವಹಾರ ಬರವಣಿಗೆಯ ಕೌಶಲ್ಯವೇ ನಶಿಸಿ ಹೋಗಿದೆ. ಕನ್ನಡವನ್ನು ದೇವರಿಂದಲೂ ಉಳಿಸಲು ಆಗಲ್ಲ. ವಿಧಾನಸೌಧದಿಂದ ಹೊರಡುವ ಸುತ್ತೋಲೆಗಳು ಸತ್ತೋಲೆಗಳಾಗಿವೆ. ಕನ್ನಡವನ್ನು ಚೆನ್ನಾಗಿ ಬಳಸಬೇಕು. ಬೇರೆ ಭಾಷೆಯನ್ನು ಅನುಕೂಲಕ್ಕೆ ತಕ್ಕಂತೆ ಅಂದಗೆಡದೆ ಬಳಸುವ ಕಲೆಯನ್ನು ಚಿಕ್ಕಂದಿನಲ್ಲಿಯೇ ಶಾಲಾ ಮಕ್ಕಳಿಗೆ ಕಲಿಸಬೇಕು. ಪ್ರತಿ ವರ್ಷವೂ ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಚರಣೆ ಮಾಡುವ ಮೂಲಕ ಕನ್ನಡಕ್ಕೆ ಶಕ್ತಿ ತುಂಬಬೇಕಾಗಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬೃಹನ್ಮಠದ ಆಡಳಿತಾಧಿಕಾರಿ ಜಿ.ಎನ್.ಮಲ್ಲಿಕಾರ್ಜುನಪ್ಪ ನಾಲ್ಕನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್.ಆರ್.ಗುರುನಾಥ್‍ಗೆ ಕನ್ನಡದ ಭಾವುಟ ಹಸ್ತಾಂತರಿಸಿ ಮಾತನಾಡುತ್ತ ಟೀಕೆಗಳಿದ್ದರೆ ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನಗಳು ಶುದ್ದಗೊಳ್ಳುತ್ತವೆ. ಪ್ರತಿಯೊಬ್ಬರಿಗೂ ಕನ್ನಡದ ಸಂವೇದನೆ ಸೂಕ್ಷ್ಮತೆಯನ್ನು ಕೊಡಲು ಸಾಹಿತ್ಯ ಮುಖ್ಯವಾಗಿ ಬೇಕು. ಸಾಹಿತ್ಯ ಎನ್ನುವುದು ಪ್ರಜಾಪ್ರುಭತ್ವದಲ್ಲಿ ಚಳುವಳಿಯ ಧ್ಯೋತಕ. ಚಳುವಳಿಯನ್ನು ಹುಟ್ಟುಹಾಕುವ ಸಾಮಥ್ರ್ಯ ಸಾಹಿತ್ಯಕ್ಕಿದೆ ಎಂದು ಹೇಳುವ ಮೂಲಕ ಸಾಹಿತ್ಯದ ಮಹತ್ವವನ್ನು ತಿಳಿಸಿದರು.
ಒಬ್ಬ ಅಧ್ಯಾಪಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಸಾಹಿತ್ಯವನ್ನು ಓದುವುದಾಗಲಿ, ಸಂಶೋಧಕ ಸಂಶೋಧನೆಯಲ್ಲಿ ಸಾಹಿತ್ಯವನ್ನು ಓದುವುದಕ್ಕಿಂತ ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಾಹಿತ್ಯ ಅತ್ಯವಶ್ಯಕ. ಸಮಾಜದಲ್ಲಿ ಪರಿವರ್ತನೆಯಾಗಲಿಲ್ಲವೆಂದರೆ ಸಾಹಿತ್ಯ ಯಾರ ಅಂತರಾಳಕ್ಕೂ ಇಳಿದಿಲ್ಲ ಎಂದರ್ಥವಾಗುತ್ತದೆ.
ವರ್ತಮಾನ, ತಲ್ಲಣ, ಮೌಲ್ಯಗಳು ನಶಿಸಿ ಹೋಗುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಹಿಂದೆ ಒಂದುವರೆ ಲಕ್ಷ ಹೆಕ್ಟೇರ್ ನೀರಾವರಿಯಾಗಿತ್ತು. ಈಗ 770 ಹೆಕ್ಟರ್‍ಗೆ ಇಳಿದಿದೆ. ಎರಡು ಲಕ್ಷ ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಅದಕ್ಕಾಗಿ ಏನೆ ಪರಿವರ್ತನೆಯಾಗಬೇಕಾದರೂ ಸಾಹಿತ್ಯ ಚಳುವಳಿಯಾಗಬೇಕು. ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೂ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸಾಹಿತ್ಯಗಳನ್ನು ಕೊಡಬೇಕಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಕೆಲವೇ ವ್ಯಕ್ತಿಗಳ, ಗುಂಪಿನ ಸಂಘಟನೆಯಾಗಬಾರದು ಎಲ್ಲರಿಗೂ ಪಸರಿಸಬೇಕು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಆರ್.ಗುರುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ, ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿಶಿವಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ರಂಗಾನಾಯ್ಕ, ಶ್ಯಾಮಲಶಿವಪ್ರಕಾಶ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
