ಅಗ್ನಿಪತ್ ಯೋಜನೆ : ರೈತರನ್ನು ಬಲಿಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ರೈತರನ್ನು ಬಲಿಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟರ್ ಮೂಕಲ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಸೈನಿಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವವರಿಗೆ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು. ರೈತರನ್ನು ಬಲಿಗೊಟ್ಟಾಯಿತು, ಈಗ ಸೈನಿಕರ ಸರದಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗುವ ಸೈನಿಕರಿಗೆ ಉದ್ಯೋಗದ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಕೇಂದ್ರದ ಬಿಜೆಪಿ ಸರ್ಕಾರ ದಿವಾಳಿಯಾಗಿದೆಯೇ? ನಿಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಲು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.

ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಲಾರದು. ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ! ಎಂದು ಹೇಳಿದ್ದಾರೆ.

ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನ ಪಾಠ ಕಲಿಸಲಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap