ಬೆಂಗಳೂರು : ಹೊಸದಾಗಿ ಅಡುಗೆ ಅನಿಲ ಸಂಪರ್ಕವನ್ನು ಪಡೆಯುವ ಗ್ರಾಕರಿಗೆ ತೈಲಕಂಪನಿಗಳು ಬೆಲೆ ಏರಿಕೆ ಮಾಡಿ ಬರೆ ಎಳೆದಿದೆ. ಅಡುಗೆ ಅನಿಲ ದರ ಏರಿಕೆ ಹೊರೆಯಿಂದಾಗಿ ಕಂಗಾಲಾಗಿರುವ ಗ್ರಾಹಕರಿಗೆ ಮತ್ತೊಂದು ಬರೆ ಬೀಳಲಿದೆ
ಈ ಹಿಂದೆ ಅಡುಗೆ ಅನಿಲ ಸಂಪರ್ಕ ಪಡೆಯಲು 1600 ರೂ. ಡೆಪಾಸಿಟ್ ಪಾವತಿಸಬೇಕಿತ್ತು. ಆದರೆ ಇದೀಗ ಸಂಪರ್ಕ ಶುಲ್ಕದಲ್ಲಿ ಬರೋಬ್ಬರಿ 850 ರೂ. ಹೆಚ್ಚಳ ಮಾಡಿದ್ದು, 2450 ರೂ. ನಿಗದಿಯಾಗಿದೆ. ಈ ಹೊಸ ಗ್ಯಾಸ್ ಸಂಪರ್ಕ ಪರಿಷ್ಕರಣೆ ದರ ಜೂ. 16ರಿಂದ ಜಾರಿಗೆಗೆ ಬರುವಂತೆ ಆದೇಶ ಮಾಡಿದ್ದಾರೆ.
ದುಬಾರಿಯಾದ ಗ್ಯಾಸ್, ರೆಗ್ಯುಲೇಟರ್ : ತೈಲ ಕಂಪೆನಿಗಳಾದ ಎಚ್‍ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ತಮ್ಮ ಗ್ಯಾಸ್ ಏಜೆನ್ಸಿಗಳ ಮೂಲಕ ಈ ಪರಿಷ್ಕರಣೆ ದರವನ್ನು ಅನುಷ್ಠಾನಗೊಳಿಸಲಿವೆ. ಗೃಹ ಬಳಕೆ ಸಿಲಿಂಡರ್‍ಗೆ ಸಂಪರ್ಕ ಶುಲ್ಕ 1450 ರೂ. ಮತ್ತು ರೆಗ್ಯುಲೇಟರ್ ಶುಲ್ಕ 150 ಸೇರಿ 1600 ರೂ. ಶುಲ್ಕ ಇದುವರೆಗೆ ಪಾವತಿಸಬೇಕಿತ್ತು. ಈಗ ಸಂಪರ್ಕದ ದರ ಪರಿಷ್ಕರಣೆ ಮಾಡಲಾಗಿದ್ದು, ಸಂಪರ್ಕ ಶುಲ್ಕವನ್ನು 2200 ರೂ. ಏರಿಕೆ ಮಾಡಲಾಗಿದೆ. ಜತೆಗೆ ರೆಗ್ಯುಲೇಟರ್ ಶುಲ್ಕವನ್ನು 250 ರೂ.ನಿಗದಿ ಪಡಿಸಲಾಗಿದೆ. 10 ವರ್ಷದಿಂದ ಸಿಲಿಂಡರ್ ಸಂಪರ್ಕದ ಶುಲ್ಕ ಪರಿಷ್ಕರಣೆ ಮಾಡಿರಲಿಲ್ಲ. ಈಗ ತೆರಿಗೆ ಹೆಚ್ಚಳ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಂಪರ್ಕ ಶುಲ್ಕ ಹೆಚ್ಚಳ ಮಾಡಲಾಗಿದೆ ಎನ್ನುತ್ತಾರೆ ಎಚ್‍ಪಿಸಿಎಲ್‍ನ ಅಧಿಕಾರಿಗಳು.
ಹೊಸ ಸಿಲಿಂಡರ್ ದರ ಹೆಚ್ಚಳ : ಈಗಾಗಲೇ ಅನಿಲ ಸಂಪರ್ಕ ಪಡೆದು ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರು ಸಿಲಿಂಡರ್ ಕಳೆದುಕೊಂಡರೆ ಹೊಸ ಸಿಲಿಂಡರ್ ಪಡೆಯಲು ನಿಗದಿ ಪಡಿಸಲಾಗಿದ್ದ ದರವನ್ನೂ ಹೆಚ್ಚಿಸಲಾಗಿದೆ. ಈ ಮೊದಲು ಪೆÇಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ ನೀಡಿ 1,750 ರೂ. ಪಾವತಿಸಬೇಕಿತ್ತು. ಆದರೀಗ ಅದನ್ನು 2650 ರೂ.ಗೆ ಹೆಚ್ಚಿಸಲಾಗಿದೆ. ದೂರು ನೀಡದಿದ್ದರೆ ಹಾಲಿ ಇದ್ದ 2300 ರೂ., 3300 ರೂ.ಗೆ ಏರಿಕೆಯಾಗಿದೆ.
