ದಾವಣಗೆರೆ:
ಇತ್ತೀಚೆಗೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಎಐಎಸ್‍ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಿಂದ ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಎಸ್‍ಎಫ್ ಜಿಲ್ಲಾಧ್ಯಕ್ಷ ಮಾದಿಹಳ್ಳಿ ಮಂಜಪ್ಪ, ಕಳೆದ ವಾರ ನಗರದ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಕಕ್ಕರಗೊಳ್ಳ ಗ್ರಾಮದ ಯುವತಿ ರಂಜಿತಾಳ ಮೇಲೆ ವಿಕೃತ ಮನಸುಳ್ಳ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಹತ್ಯೆ ಗೈದಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಸಂವಿಧಾನ ಬದ್ಧ ಕಾನೂನುಗಳು ಜಾರಿಯಲ್ಲಿದ್ದರೂ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರಿವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕ ವರ್ಗಕ್ಕೆ ಸೂಕ್ತ ಸಾಮಾಜಿಕ ಭದ್ರತೆ ಹಾಗೂ ಕಾನೂನು ರಕ್ಷಣೆ ಸಿಗದೆ ಇರವುದರಿಂದ ಗ್ರಾಮೀಣ ಭಾಗಗಳಿಂದ ನಗರದತ್ತ ಜೀವನೋಪಾಯಕ್ಕಾಗಿ ಆರ್ಥಿಕ ಸಬಲತೆ ಕಂಡುಕೊಳ್ಳಲು ಯುವತಿಯರು- ಮಹಿಳೆಯರು ಮುಖ ಮಾಡಿದ್ದಾರೆ. ಆದರೆ, ಇವರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ಕೆಲಸ ಮಾಡಿ, ಮನೆ ಸೇರುವ ವರೆಗೂ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಎಐಎಸ್‍ಎಫ್ ರಾಜ್ಯ ಉಪಾಧ್ಯಕ್ಷೆ ಎಲ್.ವೀಣಾ ಮಾತನಾಡಿ, ರಾಜ್ಯದ ವಿವಿಧಡೆ ಮುಗ್ದ ಮಕ್ಕಳು, ಅಪ್ರಾಪ್ತ ಬಾಲಕಿಯರು ಹಾಗೂ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ, ಸರ್ಕಾರಗಳು ಪ್ರಕರಣಗಳನ್ನು ಸಿಬಿಐ ಹಾಗೂ ಸಿಐಡಿಗೆ ತನಿಖೆಗೆ ವಹಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವುದರಲ್ಲಿ ವಿಫಲವಾಗಿವೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಒದಗಿಸಬೇಕು ಮತ್ತು ರಾಜ್ಯದಲ್ಲಿ ಇಂತಹ ಪ್ರಕರಣಗಳು ಮತ್ತೇ ಮರುಕಳಿಸದಂತೆ ಕಾನೂನು ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಎಸ್‍ಎಫ್ ರಾಜ್ಯ ಉಪಾದ್ಯಕ್ಷ ಚಂದ್ರನಾಯ್ಕ, ಜಿಲ್ಲಾ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾ ಸಂಚಾಲಕ ಪವನ್ ಕಾಮಗೇತನಹಳ್ಳಿ, ಇಪ್ಟಾ ಮುಖಂಡ ಐರಣಿ ಚಂದ್ರು, ಎಐಎಸ್‍ಎಫ್ ಮುಖಂಡರಾದ ಮೇಘನ, ಲಾವಣ್ಯ, ಮಮತಾ, ಮೈಥಿಲಿ, ನಂದಿತಾ, ಪುಷ್ಪ, ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ವಿಶಾಲಮ್ಮ, ಶಾರದಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
