ಅನಾಥೆಯನ್ನು ವರಿಸಿದ ರಾಮಕೃಷ್ಣ ಹೆಗಡೆ

 ದಾವಣಗೆರೆ:

      ಇಲ್ಲಿನ ಶ್ರೀರಾಮ ನಗರದಲ್ಲಿರುವ ರಾಜ್ಯ ಮಹಿಳಾ ನಿಲಯ ಬುಧವಾರ ತಳೀರು ತೋರಣಗಳಿಂದ ಅಲಂಕಾರ ಗೊಂಡಿತ್ತು. ಮಂಗಳವಾದ್ಯ ಮೊಳಗಿತ್ತು. ಇದಕ್ಕೆ ಕಾರಣ ಮಹಿಳಾ ವಸತಿ ನಿಲಯದ ಮಗಳು ಕವಿತಾ ಬಾಯಿಯ ವಿವಾಹ ಮಹೋತ್ಸವ.

       ಮಹಿಳಾ ನಿಲಯದ ನಿವಾಸಿ ಕವಿತಾ ಬಾಯಿ ಅವರ ಪೋಷಕರ ಸ್ಥಾನದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯತ್ ಸಿಇಓ ಎಸ್.ಅಶ್ವತಿ, ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಅವರುಗಳು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿ ಮನೆ ಗ್ರಾಮದ ರಾಮಕೃಷ್ಣ ಹೆಗಡೆ ಅವರಿಗೆ ಧಾರೆ ಎರೆದುಕೊಟ್ಟರು.

      ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಬೆಳಗ್ಗೆ 12ಕ್ಕೆ ಶುಭ ಮುಹೂರ್ತದಲ್ಲಿ ವರನಿಂದ ವಧುವಿಗೆ ಕಾಲುಂಗುರ ತೊಡಿಸುವುದು, ಹಾರ ಬದಲಾಯಿಸಿ, ಮಾಂಗಲ್ಯಧಾರಣೆಯೊಂದಿಗೆ ಸರಳವಾಗಿ ನಡೆಯಿತು.

      ಅನಾಥೆಯಾದ ಕವಿತಾಗೆ ಸಂಬಂಧಿಕರು ಇಲ್ಲದ ಪರಿಣಾಮ ವಸತಿ ನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪೋಷಕರು ಹಾಗೂ ಸಂಬಂಧಿಕರ ಸ್ಥಾನದಲ್ಲಿ ನಿಂತು ಮದುವೆ ನೆರವೇರಿಸಿಕೊಟ್ಟರು.

      ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿ ಮನೆ ಗ್ರಾಮದ ಮಹಾಬಲೇಶ್ವರ, ಸುನಂದಮ್ಮ ಅವರ ಪುತ್ರನಾದ ರಾಮಕೃಷ್ಣ ಹೆಗಡೆ ವ್ಯವಸಾಯ ಮಾಡುತ್ತಿದ್ದು, 2 ಎಕೆರೆ ಆಡಿಕೆ ತೋಟ ಹೊಂದಿದ್ದಾನೆ. ಇವರಿಗೆ ಒಬ್ಬ ಅಕ್ಕ ಕೂಡ ಇದ್ದಾರೆ. ಕವಿತಾ ಬಾಯಿ ಬಿಜಾಪುರ ಜಿಲ್ಲೆಯವರಾಗಿದ್ದು, ತಂದೆ, ತಾಯಿಯನ್ನು ಕಳೆದುಕೊಂಡು ಮೇಲೆ ದಾವಣಗೆರೆ ರಾಜ್ಯ ಮಹಿಳಾ ನಿಲಯದಲ್ಲಿ ಕಳೆದ ಮೂರು ವರ್ಷದಿಂದ ವಾಸವಾಗಿದ್ದಾರೆ.

      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ಜೋಡಿ ಅನ್ಯೂನ್ಯವಾಗಿ ಪರಸ್ಪರ ಶಾಂತಿ, ಸಂತೋಷದಿಂದ ಬಾಳಲಿ ಎಂದು ಶುಭ ಹಾರೈಸಿದರು.

      ಜಿಲ್ಲಾ ಪಂಚಾಯತ್ ಸಿಇಓ ಎಸ್.ಅಶ್ವತಿ ಮಾತನಾಡಿ, ಮಹಿಳಾ ವಸತಿ ನಿಲಯದಿಂದ 30 ಜನ ಅನಾಥ ಯುವತಿಯರ ಮದುವೆ ನಡೆಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ನಾಲ್ಕೈದು ವಿವಾಹಗಳಾಗಿವೆ. ಪ್ರತಿಯೊಬ್ಬರು ಅನೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಇದುವರೆಗೂ ಯಾವುದೇ ಸಮಸ್ಯೆಗಳು ಅವರಲ್ಲಿ ಕಂಡು ಬಂದಿಲ್ಲ. ನಿಲಯದಲ್ಲಿ ಇನ್ನೂ ಮೂರ್ನಾಲ್ಕು ಮಹಿಳೆಯರು ಇದ್ದು, ಸದ್ಯದಲ್ಲಿಯೇ ಅವರ ಮದುವೆಯೂ ನೆರವೇರಲಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ವಸತಿ ನಿಲಯದಲ್ಲಿನ ಅನಾಥ ಮಹಿಳೆಯರ ಮದುವೆಯಾದಲ್ಲಿ ಇಬ್ಬರ ಜಂಟಿ ಖಾತೆಗೆ ಸರಕಾರದಿಂದ 25 ಸಾವಿರ ಠೇವಣಿ ಇಡಲಾಗುತ್ತದೆ. ಅಲ್ಲದೆ, ಅವರ ಯೋಗಕ್ಷೇಮವನ್ನು ಐದು ವರ್ಷಗಳ ನೋಡಿಕೊಳ್ಳಲಾಗುತ್ತದೆ ಎಂದರು.

      ಈ ಸಂದರ್ಭದಲ್ಲಿ ಅಪರ ಜಿಲ್ಲಾಕಾರಿ ಪದ್ಮ ಬಸವಂತಪ್ಪ, ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲ್ಯಯ, ಯುವ ಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜಿಪಂ ಸಹಾಯಕ ಅಧಿಕಾರಿ ಶಶಿಧರ್, ಬಸವನಗೌಡ್ರು ಮತ್ತಿತರರು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap