ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಸಾಧನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್‍ಐಡಿ ಟಿ.ವಿ ಹೊತ್ತ ಬಿಜೆಪಿ ವಾಹನ ಮಹಾರಾಷ್ಟ್ರ ರಾಜ್ಯದ ನೊಂದಾಣೆ ಸಂಖ್ಯೆ ಹೊಂದಿದ್ದು, ಇಲ್ಲಿನ ಪಾವಗಡ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಾರ್ಯನಿಮಿತ್ತ ಅದೇ ದಾರಿಯಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಾಗುತ್ತಿದ್ದು ವಾಹನವನ್ನು ಕಂಡು ದಾಖಲಾತಿಗಳು ಕೇಳಿದಾಗ ಜೆರಾಕ್ಸ್ ಪ್ರತಿ ನೀಡಿದ ಹಿನ್ನೆಲೆಯ ವಾಹನ ಸಂಚಾರವನ್ನು ನಿರ್ಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಪಾಸಣೆ ನಡೆಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಎಫ್‍ಎಸ್‍ಟಿ ತಂಡದ ಅಧಿಕಾರಿಗಳು ವಾಹನವನ್ನು ತಾಲ್ಲೂಕು ಕಚೇರಿಗೆ ತಂದು ಮೂಲ ದಾಖಲಾತಿಗಳು ನೀಡುವಂತೆ ಸೂಚಿಸಿದರು. ವಾಹನ ಚಾಲಕ ಕೂಡಲೇ ಇಲ್ಲಿನ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ, ಡಿ.ಎಂ.ತಿಪ್ಪೇಸ್ವಾಮಿ, ಟಿ.ಬೋರನಾಯಕ, ಕರೀಕೆರೆ ತಿಪ್ಪೇಸ್ವಾಮಿ, ವೀರೇಶ್ ಮುಂತಾದವರು ಸ್ಥಳಕ್ಕೆ ದಾವಿಸಿ ಎಫ್‍ಎಸ್‍ಟಿ ತಂಡದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಪಿಎಸ್‍ಐ ಕೆ.ಸತೀಶ್ ನಾಯ್ಕ ಸಹ ಆಗಮಿಸಿ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು. ನಂತರ ವಾಹನದಲ್ಲಿ ಬಂದಿದ್ದ ಬಿಜೆಪಿ ರಾಜ್ಯಮಟ್ಟದ ಪದಾಧಿಕಾರಿ ಹಾಗೂ ಚಾಲಕ ರಾಜ್ಯಮಟ್ಟದಲ್ಲಿ ಸಂಚರಿಸಲು ಈಗಾಗಲೇ ರಾಜ್ಯ ಚುನಾವಣಾ ಆಯೋಗದಿಂದಲೇ ಅನುಮತಿ ಪಡೆದಿರುವಾಗಿ ತಿಳಿಸಿ ಕಂಪ್ಯೂಟರ್ ಸಹಕಾರದಿಂದ ಮೂಲ ಪ್ರತಿಯನ್ನೇ ಪಡೆದು ತೋರಿಸಿದಾಗ ವಾಹನ ಸಂಚಾರಕ್ಕೆ ಅಧಿಕಾರಿಗಳು ಅನುಮತಿ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗದ ನೀತಿ ನಿಯಮ ಹಾಗೂ ಸೂಚನೆಗಳನ್ನು ತಪ್ಪದೆ ಪಾಲಿಸುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಹಂತದಲ್ಲಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡದೇ ಯಾವುದೇ ಪ್ರಚಾರ ಕಾರ್ಯ ಕೈಗೊಳ್ಳುವುದಿಲ್ಲ. ಅನುಮತಿ ಇದ್ದರೂ ಸಹ ಅನಗತ್ಯವಾಗಿ ವಾಹನವನ್ನು ತಡೆದು ಪ್ರಚಾರಕ್ಕೆ ತೊಂದರೆ ಉಂಟು ಮಾಡಿದ್ದು ಬೇಸರ ತರಿಸಿದೆ ಎಂದರು.