ಅನ್ನಭಾಗ್ಯ ದುರುಪಯೋಗ : ತನಿಖೆಗೆ ಮುಂದಾದ ಸರ್ಕಾರ

ಬೆಂಗಳೂರು

      ಅನ್ನಭಾಗ್ಯ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

    ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈ ವಿಷಯ ತಿಳಿಸಿದರು. ಬಡವರಿಗಾಗಿ ಅನ್ನಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.ಆದರೆ ಅರ್ಹ ಬಡವರ ಜತೆ ಅನರ್ಹರು ಬಿಪಿಎಲ್ ಕಾರ್ಡ್ ಪಡೆದು ಅನ್ನಭಾಗ್ಯ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

     ಈ ಹಿನ್ನೆಲೆಯಲ್ಲಿ ಅನರ್ಹರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದ ಅವರು,ಯಾವ ಸ್ವರೂಪದ ತನಿಖೆ ಎಂಬುದನ್ನು ಸಧ್ಯದಲ್ಲೇ ನಿರ್ಧರಿಸಲಾಗುವುದು ಎಂದರು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆ.ಜಿ. ಅಕ್ಕಿಯನ್ನು ಸೆಪ್ಟೆಂಬರ್ ತಿಂಗಳಿನಿಂದಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

    ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ. ಹೆಚ್ಚುವರಿಯಾಗಿ ವಿತರಿಸಲು ಅಕ್ಕಿ ಸಿಗದ ಕಾರಣ ಪ್ರತಿ ಫಲಾನುಭವಿಗೆ ಐದು ಕೆ.ಜಿ. ಅಕ್ಕಿ ಬೆಲೆ 170 ರೂ. ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಒಂದು ತಿಂಗಳೊಳಗೆ ಒಂದು ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ 566 ಕೋಟಿ ರೂ.ಜಮೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

    ಈ ರೀತಿ ಹಣ ಹಾಕುವುದು ಎರಡು ತಿಂಗಳು ಮಾತ್ರ ಎಂದ ಅವರು,ಸೆಪ್ಟಂಬರ್ ನಿಂದ ಅಕ್ಕಿಯನ್ನೇ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ . ಅಕ್ಕಿ ಖರೀದಿಗೆ ಸಂಬAಧಿಸಿದAತೆ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳ ಆಹಾರ ಇಲಾಖೆ ಸಚಿವರುಗಳ ಜೊತೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಸರ್ಕಾರದ ದರದಂತೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ. ನೀಡಿ ಅಕ್ಕಿ ಖರೀದಿಸುವ ಬಗ್ಗೆಯೂ ಮಾತುಕತೆ ನಡೆದಿವೆ.

     ನಮ್ಮ ಬೆಲೆಗೆ ಈ ರಾಜ್ಯಗಳು ಅಕ್ಕಿ ನೀಡಲು ಒಪ್ಪಿದರೆ ಬಹುಶಃ ಸೆಪ್ಟೆಂಬರ್ ತಿಂಗಳಲ್ಲೇ ಅನ್ನಭಾಗ್ಯ ಯೋಜನೆಯಡಿ ಹಣ ನೀಡುವುದನ್ನು ಸ್ಥಗಿತಗೊಳಿಸಿ ಅಕ್ಕಿಯನ್ನೇ ವಿತರಿಸಲಾಗುವುದು. ಒಂದು ವಾರದೊಳಗೆ ಎಲ್ಲವೂ ಅಂತಿಮವಾಗಲಿದೆ ಎಂದರು.

    ಆಂಧ್ರ, ತೆಲಂಗಾಣ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ಈ ಹಿಂದೆಯೇ ಮಾಡಲಾಗಿತ್ತು. ಆದರೆ, ದರ ಹೆಚ್ಚಾದ ಕಾರಣ ಖರೀದಿ ಸಾಧ್ಯವಾಗಲಿಲ್ಲ. ಈಗ ಪ್ರತಿ ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರದ ದರದಂತೆ ಅಂದರೆ 34 ರೂ.ನಂತೆ ಪೂರೈಸಲು ಈ ರಾಜ್ಯಗಳು ಮುಂದಾಗಿದ್ದು, ಅಕ್ಕಿ ಖರೀದಿಯ ಸಂಬಂಧ ಮಾತುಕತೆ ನಡೆಸಲಾಗಿದೆ. ಮಾತುಕತೆ ಫಲಪ್ರದವಾದರೆ ಬಿಪಿಎಲ್ ಕಾರ್ಡ್ ದಾರರಿಗೆ ಪೂರ್ಣ ಪ್ರಮಾಣದಲ್ಲಿ ಹತ್ತು ಕೆ.ಜಿ. ಅಕ್ಕಿ ನೀಡುವುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap