ದಾವಣಗೆರೆ :
ಲಿಂಗತ್ವ ಅಲ್ಪಸಂಖ್ಯಾತರು ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಾಕಷ್ಟು ಅವಮಾನಕ್ಕೆ ಗುರಿಯಾಗುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್.ಜಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಭಯ ಸ್ಪಂದನ ಸಮುದಾಯ ಆಧಾರಿತ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಳೇ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರು ಅವಮಾನಕ್ಕೆ ತುತ್ತಾಗಿರುವುದನ್ನು ನಾನೂ ಸಹ ನೋಡಿದ್ದೇನೆ. ಈ ತೊಂದರೆಗಳನ್ನೆಲ್ಲಾ ಸರ್ಕಾರ ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
ಕಾನೂನಿನ ಚೌಕಟ್ಟಿನಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಮನವಿಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ತಮ್ಮ ಅಹವಾಲು, ಮನವಿಯನ್ನು ಅಭಯ ಸ್ಪಂದನ ಸಂಘದ ಮೂಲಕ ಪ್ರಾಧಿಕಾರಕ್ಕೆ ಸಲ್ಲಿಸಿದಲ್ಲಿ ತಾವು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಹಮ್ಮಿಕೊಂಡಿರುವ ಕಾನೂನು ಅರಿವು ಕಾರ್ಯಕ್ರಮ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಅವರು ಕಾನೂನಿನ ಬಗ್ಗೆ ತಿಳಿದುಕೊಂಡು ಇಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮಲ್ಲಪ್ಪ ಕುಮಾರ್ ಮಾತನಾಡಿ, ಇಂತಹ ಕಾನೂನು ಅರಿವು ಕಾರ್ಯಕ್ರಮಗಳು ತಾಲ್ಲೂಕು ಮಟ್ಟದಲ್ಲಿಯೂ ಆಗಬೇಕು. ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಯಾರು, ಇದರ ವ್ಯಾಖ್ಯಾನ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಗಂಡು ಹೆಣ್ಣಾಗಿ ಪರಿವರ್ತಿತರಾದವರು, ಹೆಣ್ಣು ಗಂಡಾಗಿ ಪರಿವರ್ತಿತರಾದವರು, ಗಂಡು ವೇಷಭೂಷಣದಲ್ಲಿರುವ ಹೆಣ್ಣು(ಕೋತಿ)ಗಳು, ಜೋಗಪ್ಪಗಳು, ಹಿಜಿಡಾ ಸೇರಿದಂತೆ ಅನೇಕರು ಈ ವ್ಯಾಖ್ಯಾನಕ್ಕೊಳಪಡುತ್ತಾರೆ.
ಸರ್ವೋಚ್ಚ ನ್ಯಾಯಾಲಯ ಐಪಿಸಿ ಸೆಕ್ಷನ್ 377 ರ ಕುರಿತು ಐತಿಹಾಸಿಕ ತೀರ್ಪು ನೀಡಿದ್ದು, ನ್ಯಾಯಾಂಗದ ಕುರಿತು ನಮ್ಮ ಭರವಸೆಯನ್ನು ಹೆಚ್ಚಿಸಿದೆ. ಅದಕ್ಕೆ ನಾವು ಆಭಾರಿಯಾಗಿದ್ದೇವೆ. ಆದರೆ ಸರ್ಕಾರ ಇದೀಗ ಮಾಸಾಶನವನ್ನು ರೂ. 500 ರಿಂದ 600 ಹೆಚ್ಚಿಸಿದೆ. ಹಾಗೂ ಸ್ವಯಂ ಉದ್ಯೋಗಕ್ಕೆ ರೂ. 50 ಸಾವಿರ ಸಹಾಯಧನ ನೀಡುತ್ತದೆ. ಆದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ, ಶೋಷಣೆಗೊಳಗಾದ ಈ ಸಮುದಾಯಕ್ಕೆ ಇದು ಸಾಕಾಗುವುದಿಲ್ಲ.
ಈ ಸಮುದಾಯ ಇದುವರೆಗೆ ಸೆಕ್ಸ್ ವರ್ಕ್ ಮತ್ತು ಭಿಕ್ಷಾಟನೆ ಮಾಡುತ್ತಾ ಬದುಕುತ್ತಿದೆ. ಲೈಂಗಿಕ ಕೆಲಸ ಸುಲಭದ್ದಲ್ಲ. ಅನೇಕ ಬೆದರಿಕೆ, ಹೆಚ್‍ಐವಿಯಂತಹ ಮಾರಕ ಕಾಯಿಲೆಗಳು ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ನಮ್ಮ ಸಮುದಾಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್ ವಿಜಯ್ ಕುಮಾರ್ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ತ್ರಿಪುಲಾಂಭ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಅರುಣಕುಮಾರ್ ಎಲ್. ಹೆಚ್ ಮಾತನಾಡಿದರು. ಜಿಲ್ಲಾ ವಕೀಲರ ಸಂಘ ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್, ಲಿಂಗತ್ವ ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ