ಅಪೌಷ್ಠಿಕತೆ ಹೋಗಲಾಡಿಸಲು ಅರಿವು ಮೂಡಿಸುವ ಅಗತ್ಯವಿದೆ:ರಾಘವೇಂದ್ರ ಶೆಟ್ಟಿಗಾರ್

ಗುಬ್ಬಿ:

            ತಾಯಂದಿರಲ್ಲಿ ಹಾಗೂ ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ, ಅಪೌಷ್ಠಿಕತೆ ಹೋಗಲಾಡಿಸಲು ಅರಿವು ಮೂಡಿಸುವ ಸಂಬಂಧ ಹಾಗೂ ತಾಯಿ ಗರ್ಭಾವಸ್ಥೆಯಲ್ಲಿ ಹಾಗೂ ಬಾಣಂತಿ ಸಮಯದಲ್ಲಿ ಆರ್ಥಿಕವಾಗಿ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡಿ ತಾಯಿ ಮತ್ತು ಮಗುವಿನ ಆರೋಗ್ಯ ಸಂರಕ್ಷಿಸಲು ಈ ಕಾರ್ಯಕ್ರಮದ ಮೂಲ ಉದ್ದೇಶವಾಗುದೆ ಎಂದು ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.

             ಪಟ್ಟಣದ ತಾಲ್ಲೂಕು ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಹಾಗೂ ಮಾತೃ ವಂದನಾ ಸಪ್ತಾಹ ಅರಿವು ನೆರವು ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಯಿ ಮತ್ತು ಮಗುವಿನಲ್ಲಿ ಉತ್ತಮ ಪೌಷ್ಠಿಕತೆ ಮತ್ತು ಉತ್ತಮ ಆರೋಗ್ಯ ಕಾಪಾಡುವುದು ಕಾರ್ಯಕ್ರಮದ ಉದ್ದೇಶವಾಗಿದ್ದು ಮಹಿಳೆಯರು ಇಲಾಖೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಂತೆ ಕರೆನೀಡಿದರು.

              ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿಯ ಗೃಹ ವಿಜ್ಞಾನ ತಜ್ಞರಾದ ಡಾ:ರಾಧ ಬಣಕಾರ್ ಮಾತನಾಡಿ ಸಮತೋಲನದ ಆಹಾರದ ಬಗ್ಗೆ ತಿಳಿಸುತ್ತಾ ಸ್ಥಳೀಯವಾಗಿ ದೊರಕುವ ಸೊಪ್ಪು, ತರಕಾರಿ, ಹಣ್ಣುಗಳನ್ನು ಬಳಸುವುದರಿಂದ ಅಪೌಷ್ಠಿಕತೆಯನ್ನು ಕಡಿಮೆ ಮಾಡಬಹುದಾಗಿದೆ. ಈ ಬಗ್ಗೆ ತಾಯಂದಿರು ಗಮನಹರಿಸಿ ಪೌಷ್ಠಿಕ ತೋಟಗಳನ್ನು ಬೆಳಸುವುದರ ಕಡೆ ಗಮನಹರಿಸಲು ತಿಳಿಸಿದ ಅವರು ಗರ್ಭಿಣಿ ಮತ್ತು ಬಾಣಂತಿಯರಿದ್ದಾಗ ಅಪೌಷ್ಠಿಕತೆ ಉಂಟಾಗದಂತೆ ಸಮತೋಲನದ ಆಹಾರಗಳನ್ನು ಹೆಚ್ಚು ಸೇವಿಸುವ ಮೂಲಕ ತಾವು ಮತ್ತು ತಮ್ಮ ಮಗುವನ್ನು ಉತ್ತಮ ಆರೋಗ್ಯವಂತರಾಗುವಂತೆ ತಿಳಿಸಿದರು.

              ಸಾವಯವ ಕೃಷಿ ತಜ್ಞರಾದ ಡಾ:ಪ್ರಶಾಂತ್ ಮಾತನಾಡಿ ಪೌಷ್ಠಿಕ ಕೈತೋಟಗಳನ್ನು ನಿರ್ಮಾಣ ಮಾಡಿಕೊಂಡು ಮಹಿಳೆಯರು ಸಾವಯವ ಗೊಬ್ಬರಗಳನ್ನು ಬಳಸಿ ಉತ್ತಮ ಸೊಪ್ಪು ತರಕಾರಿಗಳನ್ನು ಬೆಳೆಸಿ ಸೇವಿಸುವುದರಿಂದ ಅಪೌಷ್ಠಿಕತೆಯ ಪ್ರಮಾಣವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ ಅವರು ನಮ್ಮ ಸಂಸ್ಥೆವತಿಯಿಂದ ಅಪೌಷ್ಠಿಕ ಮಕ್ಕಳ ಪೋಷಕರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪೌಷ್ಠಿಕ ತೋಟ ನಿರ್ಮಾಣ ಮಾಡಲು ಸೊಪ್ಪು, ತರಕಾರಿ, ಹಣ್ಣಿನ ಬೀಜಗಳನ್ನು ವಿತರಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
             ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ಆರ್.ಹೊನ್ನೇಶಪ್ಪ ಮಾತನಾಡಿ ಪೌಷ್ಠಿಕ ಸಪ್ತಾಹ ಹಾಗೂ ಮಾತೃವಂದನಾ ಸಪ್ತಾಹಗಳನ್ನು ಆಚರಿಸುವ ಉದ್ದೇಶಗಳ ಪರಿಪೂರ್ಣವಾದ ಮಾಹಿತಿ ಮತ್ತು ಮಾರ್ಗಧರ್ಶನ ನೀಡಿದ ಅವರು ಅಪೌಷ್ಠಿಕ ಮಕ್ಕಳ ತಪಾಸಣೆ ಹಾಗೂ ಅವರಿಗೆ ಇಲಾಖೆಯಿಂದ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಪೌಷ್ಠಿಕ ಪೂರ್ಣ, ತುಮಕೂರು ಕಾರ್ಯಕ್ರಮ ಜಾರಿಯಲ್ಲಿದ್ದು ಈ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಮಾಹಿತಿ ನೀಡಿ ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರು ಪೌಷ್ಠಿಕ ಪೂರ್ಣ ತೋಟ ನಿರ್ಮಾಣ ಮಾಡಿ ಅಪೌಷ್ಠಿಕತೆಯನ್ನು ತಾಯಂದಿರಲ್ಲಿ ಹಾಗೂ ಮಕ್ಕಳಲ್ಲಿ ಹೋಗಲಾಡಿಸಲು ಕ್ರಮವಹಿಸಲು ಈ ದಿನ ಸಂಬಂಧಿಸಿದ ಪರಿಕರಗಳನ್ನು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನೀಡುತ್ತಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸೂಚಿಸಿದರು.
              ಮಣ್ಣಿನ ತಜ್ಞರಾದ ಡಾ:ರಮೇಶ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ:ಬಿಂಧು ಮಾದವ್, ಅಧಿಕ ಸಿವಿಲ್ ನ್ಯಾಯಾಧೀಶರಾದ ಗಣೇಶ್‍ರಾದ, ವಕೀಲರ ಸಂಘದ ಅಧ್ಯಕ್ಷ ಷಡಾಕ್ಷರಿ, ಆರೋಗ್ಯ ಇಲಾಖೆಯ ಆರ್.ಬಿ.ಎಸ್.ಕೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಮತ್ತು ಅಪೌಷ್ಠಿಕ ಮಕ್ಕಳ ಪೋಷಕರು ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link