ಅಭಿನಂದನಾ ಕಾರ್ಯಕ್ರಮ

ತುಮಕೂರು:

              ದೇಶದಲ್ಲಿ ಇಂದು ನಡೆಯುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ಘಟನೆಗಳಿಂದ ದೊಡ್ಡ ಗಂಡಾಂತರ ಸೃಷ್ಟಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನವಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಕಳವಳ ವ್ಯಕ್ತಪಡಿಸಿದರು. ಜೈಲರ್ ಹುದ್ದೆಗೆ ಆಯ್ಕೆಯಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ಎಂ.ಎ ವಿದ್ಯಾರ್ಥಿ ಗೋಪಿನಾಥ್‍ಗೆ ವಿವಿಯ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
             ನಿಲಯದಲ್ಲಿ ಸಾಂಬಾರ್ ಸರಿ ಇಲ್ಲವೆಂದರೆ ವಿದ್ಯಾರ್ಥಿಗಳು ಗಲಾಟೆ ಮಾಡುತ್ತೀರಿ. ಆದರೆ ನಮಗೆ ಅನ್ನ ಕೊಡುತ್ತಿರುವ ಸಂವಿಧಾನವನ್ನು ಸುಟ್ಟಾಗ ಮಲಗುತ್ತೀರಿ. ಭಾರತದ ಸಾಮಾಜಿಕ ಪರಿಸ್ಥಿತಿ ಭಿನ್ನವಾಗಿದೆ. ತಳಮೂಲದಿಂದ ಬಂದವರಿಗೆ ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನ ಪಡೆಯುವುದು ಸವಾಲಿನ ಕೆಲಸವಾಗಿದೆ. ದುರಂತವೆಂದರೆ ಉದ್ಯೋಗ ಪಡೆದರೂ ಸಾಮಾಜಿಕ ಸ್ಥಾನಮಾನ ಸಿಗುವುದಿಲ್ಲ. ಈ ದೇಶದ ರಾಷ್ಟ್ರಪತಿಯಾದರೂ ದೇವಸ್ಥಾನದ ಹೊರಗಡೆಯೇ ನಿಲ್ಲಿಸುತ್ತಾರೆ. ಆದ್ದರಿಂದ ನಾವು ತಳಸಮುದಾಯದವರಲ್ಲಿ ಅರಿವನ್ನು ಮೂಡಿಸಬೇಕು. ಈ ಸಾಮಾಜಿಕ ವಿಷವರ್ತುಲದಿಂದ ಹೊರಬರುವ ಬಗ್ಗೆ ಕನಿಷ್ಠ ಮಟ್ಟದ ಚಿಂತನೆ ನಡೆಸಬೇಕಾಗಿದೆ ಎಂದರು.
ಸಾಮಾಜಿಕ ಅಪಮಾನಗಳು ನಮ್ಮ ಬೆನ್ನ ಹಿಂದಿವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನಸ್ಸು ಮಾಡಿದ್ದರಿಂದ ನಾವೆಲ್ಲ ಇಂದು ಮನುಷ್ಯರಾಗಿ ಬದುಕುತ್ತಿದ್ದೇವೆ. ಅದಕ್ಕಾಗಿ ನೀವು ನಿಮ್ಮ ಬದುಕಿಗಾಗಿ ಹಾಗೂ ಬದುಕಿಸುವುದಕ್ಕಾಗಿ ಹೋರಾಡಬೇಕು.

            ಅಧೋಲೋಕದಿಂದ ಬಂದ ನಾವು ಅಂಬೇಡ್ಕರ್‍ರ ದೆಸೆಯಿಂದ ಬೆಳಕನ್ನು ಕಾಣುತ್ತಿದ್ದೇವೆ. ಈ ಬೆಳಕನ್ನು ಕಂಡುಕೊಂಡು ನಾವು ಮತ್ತಷ್ಟು ಬೆಳಕಾಗಬೇಕು. ಮತ್ತೆ ಕತ್ತಲೆಗೆ ಹೋಗಬಾರದು. ನಮ್ಮ ಜವಾಬ್ದಾರಿ ಹೆಚ್ಚಿಸಿಕೊಂಡು ಕ್ರಿಯಾಶೀಲತೆ, ಕೌಶಲ್ಯತೆ ಬೆಳೆಸಿಕೊಳ್ಳಬೇಕು. ಸೌಲಭ್ಯಗಳನ್ನು ಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ನಿರ್ದೇಶಕ ಪ್ರೊ.ಎಂ.ಕೊಟ್ರೇಶ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ಭಾರತ ಇಂದು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಅಂಬೇಡ್ಕರ್ ಅವರು ತಮಗೆ ಎಷ್ಟೇ ಅವಮಾನಗಳಾದರೂ ತಾಳ್ಮೆಗೆಡಲಿಲ್ಲ. ಎಂದಿಗೂ ಅವರು ಆರ್ಭಟ ತೋರಲಿಲ್ಲ. ಅವರಂತೆ ವಿದ್ಯಾರ್ಥಿಗಳು ತಾಳ್ಮೆಯ ಗುಣ ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದರು. ವಿದ್ಯಾರ್ಥಿಗಳು ಗುರುಗಳನ್ನು ಹುಡುಕುವ ಅಗತ್ಯವಿಲ್ಲ. ಬಸವಣ್ಣ ಹೇಳಿದಂತೆ ಅರಿವೇ ತನ್ನ ಗುರು. ಆದ್ದರಿಂದ ವಿದ್ಯಾರ್ಥಿಗಳು ಯಾರ ಗುಲಾಮರಾಗುವ ಅಗತ್ಯವಿಲ್ಲ. ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು, ಪ್ರತಿಯೊಂದು ಸವಾಲಿಗೂ ಉತ್ತರವಿದೆ. ದೂಷಣೆ ಮಾಡದೆ ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದರು.
         ಪದವಿ ಮುಗಿದ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪೇದೆಗೆ ಆಯ್ಕೆಯಾಗಿದ್ದೆ. ಮೂರು ದಿನ ಕರ್ತವ್ಯ ನಿರ್ವಹಿಸಿದ ನನಗೆ ಈ ಹುದ್ದೆ ನನ್ನ ಸಾಮಥ್ರ್ಯಕ್ಕೆ ತಕ್ಕದ್ದಲ್ಲ ಎಂದು ರಾಜೀನಾಮೆ ನೀಡಿದೆ. ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಂದ ಅಪಮಾನಕ್ಕೊಳಗಾಗಿದೆ. ಅದನ್ನು ಸವಾಲಾಗಿ ಸ್ವೀಕರಿಸಿ ಇಂದು ಪೊಲೀಸ್ ಇಲಾಖೆಯಲ್ಲೇ ಉನ್ನತ ಹುದ್ದೆ ಪಡೆದುಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಮುಖ್ಯ ಗುರಿ. ಮೂಲತಃ ನಾನು ಉತ್ತರಕರ್ನಾಟಕದವನಾಗಿದ್ದು ಆ ಭಾಗದಲ್ಲಿ ದಲಿತರು ಹಾಗೂ ಹಿಂದುಳಿದ ತಳ ಸಮುದಾಯಗಳಿಗೆ ನೆರವಾಗಬೇಕೆಂಬ ಗುರಿ ಹೊಂದಿದ್ದೇನೆ. ಅದಕ್ಕಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಉಚಿತ ಶಿಕ್ಷಣ ನೀಡುವ ಯೋಜನೆ ಕೂಡ ಇದೆ ಎಂದರು.
                ಕಾರ್ಯಕ್ರಮದಲ್ಲಿ ಜೈಲರ್ ಹುದ್ದೆಗೆ ಆಯ್ಕೆಯಾದ ಗೋಪಿನಾಥ್.ಡಿ ಅವರನ್ನು ನಿಲಯದ ವಿದ್ಯಾರ್ಥಿಗಳು ಅಭಿನಂದಿಸಿದರು. ಈ ವೇಳೆ ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ್, ಜಿಲ್ಲಾಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಚಿಕ್ಕಣ್ಣ, ನಾರಾಯಣಪ್ಪ, ಅಂಜನಮೂರ್ತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link