ಮಧುಗಿರಿ:
ಸಮಾಜದ ಒಳಿತಿಗೆ ವಿಪ್ರರು ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದು ವಿಪ್ರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ತಾಡಿಶಿವರಾಮ್ ತಿಳಿಸಿದರು.
ಪಟ್ಟಣದ ವಿಪ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ನೂತನ ಪುರಸಭಾ ಸದಸ್ಯ ಕೆ.ನಾರಾಯಣ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಯುವಕರು ಹೆಚ್ಚು, ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಹಾಗು ಪ್ರಜಾಪ್ರಭುತ್ವದಲ್ಲಿ ದೊರೆಯುವ ಅಧಿಕಾರ ಹಾಗು ಸವಲತ್ತುಗಳನ್ನು ಪಡೆಯುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಅರ್ಥಪೂರ್ಣ ಸೇವೆ ಮತ್ತು ಲಾಭ ಪಡೆಯುವಂತಾಗಬೇಕು ಎಂದರು.
ವಿಪ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ ಚುನಾವಣೆಗಳಲ್ಲಿ ಪಕ್ಷಾತೀತವಾಗಿ ನಮ್ಮ ಬ್ರಾಹ್ಮಣ ಸಮಾಜದ ಅಥವಾ ಸಮೂದಾಯಕ್ಕೆ ಉಪಕಾರಿಯಾಗಿರುವಂತಹ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಕರೆ ನೀಡಲಾಗಿತ್ತು. ಅಂತೆಯೇ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ನಮ್ಮ ವಿಪ್ರ ಸಮಾಜದ ಕೆ.ನಾರಾಯಣ್ ಆಯ್ಕೆಯಾಗಿರುವುದು ಹೆಮ್ಮೆಪಡುವಂತಹ ವಿಷಯ ಎಂದರು.
ಶ್ರೀಶಂಕರ ಸೇವಾ ಸಮಿತಿ ಕಾರ್ಯದರ್ಶಿ ಪಿ.ಆರ್.ನಂಜುಂಡಯ್ಯ, ವಿಪ್ರ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ರವೀಶ್, ಯೋಗಣ್ಣ ಮಾತನಾಡಿ ನೂತನ ಪುರಸಭಾ ಸದಸ್ಯ ಕ.ನಾರಾಯಣ್ ಅವರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಮುಂದಿನ ಚುನಾವಣೆಯಲ್ಲೂ ವಿಜಯ ಪತಾಕೆ ಹಾರಿಸುವಂತಾಗಲಿ ಎಂದು ಹಾರೈಸಿದರು.
ನೂತನ ಪುರಸಭಾ ಸದಸ್ಯ ಕೆ.ನಾರಾಯಣ್ ಮಾತನಾಡಿ ತಮಗೆ ನೀಡಿದ ಅಭೂತಪೂರ್ವ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಧುಗಿರಿ ಪಟ್ಟಣದ ಅಭಿವೃದ್ದಿಗೆ ಪ್ರಮಾಣೀಕವಾಗಿ ಶ್ರಮಿಸುವ ಮೂಲಕ ಸಮಾಜದ ಗೌರವವನ್ನು ಎತ್ತಿ ಹಿಡಿಯುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಪದಾಧಿಕಾರಿಗಳಾದ ಸಿ.ನಾಗರಾಜ್, ಕೆ.ಶ್ರೀನಿವಾಸಮೂರ್ತಿ, ಬಿ.ಪಿ.ನಾರಾಯಣ್, ಲಕ್ಷ್ಮಿಪ್ರಸಾದ್, ಸೂರ್ಯನಾರಾಯಣರಾವ್, ಸುಬ್ರಹ್ಮಣ್ಯಹೆಬ್ಬಾರ್, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ