ಅಭಿವೃದ್ದಿ, ಜನರೊಂದಿಗಿನ ಒಡನಾಟ ಗೆಲುವಿಗೆ ಕಾರಣ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್‍ಬಾಬು ಅಭಿಮತ 

ಚಿತ್ರದುರ್ಗ;

              ನಾನು ಇದೇ ವಾರ್ಡಿನಲ್ಲಿ ಮೂರು ಬಾರಿ ಸದಸ್ಯನಾಗಿ ಮಾಡಿರುವ ಅನೇಕ ಅಭಿವೃದ್ದಿ ಕೆಲಸಗಳು ಇನ್ನೂ ಜನರ ಮನಸ್ಸಿನಲ್ಲಿ ಉಳಿದಿದೆ. ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಅಭಿವೃದ್ದಿಯ ರಾಜಕಾರಣ ಅಷ್ಟೇ ಗೊತ್ತು. ಯಾವತ್ತಿಗೂ ಜಾತಿ ರಾಜಕಾರಣ ಮಾಡಿಲ್ಲ. ಅದರ ಅಗತ್ಯವೂ ಇಲ್ಲ. ನಮ್ಮ ವೈಕ್ತಿತ್ವ ಮತ್ತು ಬದ್ಧತೆಯ ಆಧಾರದ ಮೇಲೆ ಅಧಿಕಾರ ಅವಲಂಬಿಸಿರುತ್ತದೆ…
ಚಿತ್ರದುರ್ಗ ನಗರಸಭೆಯ ಚುನಾವಣೆಯಲ್ಲಿ 22ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐದನೇ ಬಾರಿಗೆ ಸ್ಪರ್ದಿಸಿರುವ ಬಿ.ಎಲ್.ರವಿಶಂಕರ ಬಾಬು ಅವರ ಮನದಾಳದ ಮಾತುಗಳಿವು.

              ಚಿತ್ರದುರ್ಗದ 22ನೇ ವಾರ್ಡಿನಲ್ಲಿ ರವಿಶಂಕರ್‍ಬಾಬು ಸತತವಾಗಿ ನಾಲ್ಕು ಬಾರಿ ಸ್ಪರ್ದೆ ಮಾಡಿದ್ದು, ಇದೀಗ ಐದನೇ ಬಾರಿಗೆ ಅಖಾಡಕ್ಕಿಳಿಯುವ ಮೂಲಕ ಹೊಸ ದಾಖಲೆ ನಿರ್ಮಿಸಲು ಹೊರಟಿದ್ದಾರೆ. ಇದುವರೆಗೂ ನಾಲ್ಕು ಬಾರಿ ಸ್ಪರ್ದಿಸಿರುವ ರವಿಶಂಕರ್‍ಬಾಬು ಸತತವಾಗಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ.

              ಅಚ್ಚರಿಯ ಸಂಗತಿ ಎಂದರೆ 22ನೇ ವಾರ್ಡ್‍ನಲ್ಲಿಯೇ ರವಿಶಂಕರ್‍ಬಾಬು ಕಳೆದ ನಾಲ್ಕು ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ. ಇಲ್ಲಿ ಎರಡು ಮೂರು ಬಾರಿ ಮೀಸಲಾತಿ ಬದಲಾಗಿದ್ದರೂ ಬದಲಾದ ಮೀಸಲಾತಿ ಅವರಿಗೆ ವರದಾನವಾಗುತ್ತಲೇ ಬಂದಿದೆ.

              ಜೆಸಿಆರ್ ವಿ.ಪಿ. ಬಡಾವಣೆ, ಜೆಸಿಆರ್ ಬಡಾವಣೆಯ, ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಪ್ರದೇಶ, ಬೆಸ್ಕಾಂ ವಸತಿ ಗೃಹಗಳ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ 22ನೇ ವಾರ್ಡ್ ಒಂದು ರೀತಿಯ ಪ್ರತಿಷ್ಟಿತ ವಾರ್ಡ್ ಎಂದೇ ಕರೆಯಲಾಗುತ್ತಿದೆ. ಇಲ್ಲಿ ಬಹುಪಾಲು ಸರ್ಕಾರಿ ನೌಕರರು, ಉದ್ಯಮಿಗಳು, ವೈದ್ಯರು, ಹಾಗೂ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು ವಾಸಿಸುತ್ತಿದ್ದಾರೆ. ಈ ಕಾರಣದಿಂದಾಗಿ ಇದೊಂದು ಪ್ರತಿಷ್ಟಿತ ವಾರ್ಡ್ ಎಂದೇ ಬಿಂಬಿತವಾಗಿದೆ.

              ಒಂದೇ ವಾರ್ಡಿನಲ್ಲಿ ಸತತವಾಗಿ ಒಬ್ಬರೇ ಐದು ಬಾರಿ ಸ್ಪರ್ದಿಸಿರುವುದು ಚಿತ್ರದುರ್ಗದ ಇತಿಹಾಸದಲ್ಲಿಯೇ ಇಲ್ಲ. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ ಹೊಸ ಇತಿಹಾಸ ಸೃಷ್ಠಿಸಲು ಹೊರಟಿದ್ದಾರೆ.
ಚುನಾವಣೆಯ ಬ್ಯೂಸಿಯಲ್ಲೂ ಪತ್ರಿಕೆಯ ಜೊತೆ ಮಾತನಾಡಿದ ರವಿಶಂಕರ್ ಬಾಬು, ತಮ್ಮ ಮೂರು ಅವಧಿಯಲ್ಲಿನ ಸಾಧನೆ, ಜನರ ಜೊತೆಗಿನ ಒಡನಾಟ ಮತ್ತು ವಾರ್ಡಿನ ಅಭಿವೃದ್ದಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

 ಒಂದೇ ವಾರ್ಡಿನಲ್ಲಿ ಸತತ 5 ಬಾರಿ ಸ್ಪರ್ದೆ ಹೇಗೆ ?

              ಸರ್ಕಾರದ ಮೀಸಲಾತಿಯಿಂದ ನನಗೆ ಪ್ರತಿ ಚುನಾವಣೆಯಲ್ಲಿಯೂ ಅನುಕೂಲವಾಗಿದೆ. ಮೂರು ಬಾರಿಯೂ ಇಲ್ಲಿ ಗೆದಿದ್ದೇನೆ. 1995ರಲ್ಲಿ ಈ ವಾರ್ಡ್ ಸಾಮಾನ್ಯ ಮೀಸಲಾಗಿತ್ತು. ಅಂದು ಮೊದಲ ಬಾರಿಗೆ ನಮ್ಮ ಯುವಕರ ತಂಡದ ಒತ್ತಾಸೆಯಂತೆ ಸ್ಪರ್ದೆಗಿಳಿದೆ. ಆದರೆ ಯಶಸ್ವಿಕಾಣಲಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ಐದು ವರ್ಷಗಳ ಕಾಲ ಯುವಕರ ಪಡೆಯನ್ನು ಕಟ್ಟಿಕೊಂಡು ಸ್ವಚ್ಚತೆಯ ಕುರಿತು ವಾರ್ಡಿನಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ.

              ಪ್ರತಿನಿತ್ಯ ನಮ್ಮ ತಂಡ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿತು. ಯಾವುದೇ ಸ್ವಾರ್ಥ, ಉದ್ದೇಶವಿಟ್ಟುಕೊಂಡು ಕೆಲಸ ಮಾಡಲಿಲ್ಲ. ನಾವು ಸುಮಾರು ಮೂರು ದಶಕಗಳಿಗಿಂತ ಇಲ್ಲಿಯೇ ವಾಸಿಸುತ್ತಿದ್ದೇವೆ. ನಮ್ಮ ಬಡಾವಣೆ ಸುಂದರವಾಗಿರಬೇಕು ಎನ್ನುವ ಆಶಯದೊಂದಿಗೆ ನಾವು ಸ್ವಚ್ಚತೆಯ ಕೆಲಸಕ್ಕೆ ಮುಂದಾದೆವು. ಮುಂದಿದಿಮುನಿಸಿಪಾಲಿಟಿಯವರು ಮಾಡಬೇಕಾದ ಕೆಲಸವನ್ನು ನಾವೇ ಬೀದಿಗಳಿದು ಮಾಡಿದೆವು. ಇಡೀ ವಾರ್ಡಿನ್ನು ಸುಂದರವನ್ನಾಗಿಸಲು ಶ್ರಮಹಿಸಿದೆವು. ನಮ್ಮ ಯುವಕರ ಪಡೆಯ ಜನಪರ ಕೆಲಸ ಮತ್ತು ಪರಿಸರ ಕಾಳಜಿಗೆ ಇಡೀ ವಾರ್ಡಿನ ಜನರು ಪ್ರಶಂಸಿಸಿ ಉತ್ತೇಜನ ನೀಡಿದರು. ಇದೇ ನಮ್ಮ ತಂಡಕ್ಕೆ ಬಹುದೊಡ್ಡ ಸ್ಪೂರ್ತಿ.

              ಮತ್ತೆ 2001ರಲ್ಲಿ ನಗರಸಭೆ ಚುನಾವಣೆ ಘೋಷಣೆಯಾಯಿತು. ಈ ವಾರ್ಡ್ ಬಿಸಿಎಂ(ಎ)ಗೆ ಮೀಸಲಾಗಿದ್ದು, ಅಂದು ಮತ್ತೆ ಚುನಾವಣಗೆ ಸ್ಪರ್ದಿಸಿ ಬಾರೀ ಅಂತರದಿಂದ ಗೆಲುವು ಸಾಧಿಸಿದೆ. 2007 ಮತ್ತು 2013ರ ಚುನಾವಣೆಯಲ್ಲಿಯೂ ಮತ್ತೆ ಸತತವಾಗಿ ಗೆಲುವು ದಾಖಲಿಸಿದೆ. ಇದೀಗ ಐದನೇ ಬಾರಿಗೆ ಸ್ಪರ್ದಿಸುತ್ತಿದ್ದೇನೆ.

 ನಿಮ್ಮ ಮೂರು ಅವಧಿಯ ಸಾಧನೆಗಳೇನು ?

             ನಗರಸಭೆಯ 22ನೇ ವಾರ್ಡ್ ಇಡೀ ಚಿತ್ರದುರ್ಗಕ್ಕೆ ಮಾದರಿಯಾಗಿದೆ. ಈ ವಾರ್ಡಿನ ಜನರು ನನ್ನ ಅಭಿವೃದ್ದಿ ಮತ್ತು ಜನಪರ ಕಾಳಜಿಗೆ ಮನ್ನಣೆ ನೀಡಿ ಮೂರು ಬಾರಿಯೂ ಸತತವಾಗಿ ಗೆಲ್ಲಿಸಿಕೊಂಡಿದ್ದು, ಮತದಾರರ ಋಣ ತೀರಿಸುವ ಪ್ರಮಾಣಿಕ ಪ್ರಯತ್ನ ನನ್ನ ಮೂರು ಅವಧಿಯಲ್ಲಿಯೂ ನಡೆದಿದೆ.

             ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಿವೆ. ನಗರಸಭೆಯೂ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಲಬ್ಯ ಇರುವ ಅನುದಾನಗಳನ್ನು ತಂದು ವಾರ್ಡಿನ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಬೇರೆ ವಾರ್ಡ್‍ಗಳನ್ನು ಗಮನಿಸಿದರೆ ಇದು ಇಡೀ ನಗರಕ್ಕೆ ಮಾದರಿ ವಾರ್ಡ್ ಎನಿಸಿಕೊಂಡಿದೆ. ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ರಸ್ತೆಗಳ ಸುಧಾರಣೆ, ಚರಂಡಿಗಳ ವ್ಯವಸ್ಥೆಯೂ ಒಳಗೊಂಡಂತೆ ನಾಗರೀಕ ಸೌಲಬ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲಾಗಿದೆ.

             ಕಳೆದೆರಡು ವರ್ಷಗಳ ಹಿಂದೆ ಇಡೀ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ನಾಗರೀಕರು ಕುಡಿಯುವ ನೀರಿಗಾಗಿ ಬೀದಿ ಬೀದಿ ಅಲೆದಾಡುವÀ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ 22ನೇ ವಾರ್ಡಿನಲ್ಲಿ ಅಂತಹ ಸಮಸ್ಯೆ ಎದುರಾಗಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇನೆ.

             ನಗರದ ಬಹುತೇಕ ವಾರ್ಡ್‍ಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆಯಾಗಿದ್ದು, ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ನಗರಸಭೆ ವೆಚ್ಚ ಮಾಡಿದೆ. ಪ್ರತಿ ವಾರ್ಡಿಗೂ ನಿತ್ಯ 10ರಿಂದ 15 ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆಯಾಗಿದೆ. ಆದರೆ 22ನೇ ವಾರ್ಡಿನಲ್ಲಿ ಒಂದೇ ಒಂದು ಟ್ಯಾಂಕರ್ ಸಹ ಬಳಕೆಯಾಗಿಲ್ಲ.

               ಜನರಿಗೆ ಭವಿಷ್ಯದ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಬಾರದೆಂಬ ಆಲೋಚನೆಯಿಂದ ಬೊರ್‍ವೆಲ್ ಸೇರಿದಂತೆ ವಿವಿಧ ಮೂಲಗಳಿಂದ ನೀರಿನ ಸಮರ್ಪಕ ವ್ಯವಸ್ಥೆ ಮಾಡಿದ್ದೇನೆ. ಜೊತೆ ಜೊತೆಗೆ ಇಡೀ ವಾರ್ಡ್‍ನ್ನು ಸ್ವಚ್ಚತೆಯಿಂದ ಇಟ್ಟುಕೊಂಡಿದ್ದೇನೆ. ನನ್ನ ವಾರ್ಡಿನಲ್ಲಿ ಎಲ್ಲಿಯೂ ಕಸದ ರಾಶಿ ಬೀಳದಂತೆ ನೋಡಿಕೊಂಡಿದ್ದೇನೆ.

                ಚಿತ್ರದುರ್ಗದ ರಸ್ತೆಗಳ ಬಗ್ಗೆ ಸಾರ್ವಜನಿಕರು ಬೇಸರಿಸಿಕೊಂಡಿದ್ದಾರೆ. ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳೇ ಇಲ್ಲ. ರಸ್ತೆಗಳ ಮದ್ಯೆಯೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಆದರೆ ನನ್ನ 22ನೇ ವಾರ್ಡಿನಲ್ಲಿ ರಸ್ತೆಗಳು ಸಾಕಷ್ಟು ಸುಧಾರಣೆಯಾಗಿವೆ. ವಾರ್ಡಿನ ಎಲ್ಲಾ ಬೀದಿಗಳಲ್ಲೂ ಉತ್ತಮ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ.

 ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆಯೇ ?

                ಖಂಡಿತವಾಗಿಯೂ ನಾನೇ ಗೆಲ್ಲುತ್ತೇನೆ. ಕಳೆದ ಮೂರು ಅವಧಿಯಲ್ಲಿಯೂ ವಾರ್ಡಿಗೆ ನ್ಯಾಯ ದೊರೆಕಿಸಿಕೊಟ್ಟಿದ್ದೇನೆ. ನಾನು ಇದೇ ವಾರ್ಡಿನ ಮೂಲ ನಿವಾಸಿ. ಇಲ್ಲಿನ ಜನರ ಜೊತೆಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದೇನೆ.
ನನ್ನ ಕೆಲಸಗಳನ್ನು ಜನರು ನೋಡಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಸ್ಪಂದಿಸಿದ್ದೇನೆ. ಇಲ್ಲಿನ ಜನರು ಜಾತಿ, ಪಕ್ಷ ಮೀರಿ ನನ್ನನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಜನರ ಆಶೀರ್ವಾದ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.

Recent Articles

spot_img

Related Stories

Share via
Copy link