ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡೋಣ: ಎಂಪಿಆರ್

ದಾವಣಗೆರೆ :

       ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಗ್ರಾಮಸ್ಥರಿಗೆ ಕರೆ ನೀಡಿದರು.

       ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯ್ತಿ, ಹೊನ್ನಾಳಿ ಇವರ ಸಹಯೋಗದೊಂದಿಗೆ ಕುಂದೂರಿನ ಸಾಸ್ವೆಹಳ್ಳಿ ಹೋಬಳಿಯ ಶ್ರೀ ಆಂಜನೇಯ ಸ್ವಾಮಿ ಸಭಾಭವನ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಜನ ಸಂಪರ್ಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

         2008 ನೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾಲ್ಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಜಾರಿಗೆ ತಂದಿದ್ದರು. ಅಂದು ಹೊನ್ನಾಳಿ ತಾಲ್ಲೂಕು ಮಟ್ಟದ ಸಭೆಗಳಲ್ಲಿ ಸುಮಾರು 10 ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲಾಗಿತ್ತು.

          ಒಟ್ಟು 51 ಜನ ಸಂಪರ್ಕ ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಪ್ರತಿ ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದ್ದು, ಸಂಧ್ಯಾ ಸುರಕ್ಷೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ, ವಿಕಲಚೇತರಿಗೆ ಸೌಲಭ್ಯ, ಮನಸ್ವಿನಿ, ಸಾಗುವಳಿ ಚೀಟಿ ವಿತರಣೆ ಸೇರಿದಂತೆ ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಬಹುದಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದು, ಜನ ಪ್ರತಿನಿಧಿಗಳ ಸಮ್ಮುಖದಲ್ಲೇ ಪರಿಶೀಲಿಸಲಿದ್ದಾರೆ.

          ಇಲ್ಲೇ ಸೌಲಭ್ಯ ದೊರಕುವಂತಹ ಪ್ರಕರಣಗಳಿಗೆ ಈಗಲೇ ಮಂಜೂರಾತಿ ನೀಡಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

        ಹರಪನಹಳ್ಳಿ ತಾಲ್ಲೂಕಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಅತ್ಯಂತ ಯಶಸ್ವಿಯಾಗಿದೆ. ನಮ್ಮ ತಾಲ್ಲೂಕಿನಲ್ಲಿಯೂ ಈ ಯೋಜನೆಯ ಸದ್ಬಳಕೆ ಆಗಬೇಕು. ಇದೊಂದು ಉತ್ತಮವಾದ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರೆಲ್ಲರೂ ಸಹಕರಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ. ಜನರಿಗಾಗಿ ಏನು ಉತ್ತಮ ಕೆಲಸ ಮಾಡಿದ್ದೀವಿ ಅನ್ನುವುದು ಮುಖ್ಯ. ಯಾರೇ ಆಗಲಿ ವಿನಾಕಾರಣ ಅಭಿವೃದ್ಧಿಗೆ ಅಡ್ಡಿಪಡಿಸದೇ, ಸಂಘರ್ಷಕ್ಕೆ ಎಡೆಮಾಡಿಕೊಡದೇ ಎಲ್ಲರೂ ಒಟ್ಟಾಗಿ ಜನಪರವಾದ ಕೆಲಸಗಳನ್ನು ಮಾಡಬೇಕು.

 ಇದಕ್ಕೆ ನನ್ನ ಸಹಕಾರ ಕೂಡ ಇದೆ ಎಂದರು. ಮನೆ, ಶೌಚಾಲಯ ಇತರೆ ನಿರ್ಮಾಣಕ್ಕೆ ಮರಳು ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂಬ ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಮರಳು ಬಂಗಾರದಂತಾಗಿದೆ. ಎಲ್ಲದಕ್ಕೂ ಎಂ-ಸ್ಯಾಂಡ್ ಬಳಕೆ ಸಾಧ್ಯವಿಲ್ಲ. ಮರಳಿನ ಕುರಿತು ಸಭೆ ನಡೆಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಜನರಿಗೆ ಸೂಕ್ತ ರೀತಿಯಲ್ಲಿ ಮರಳು ಬಳಕೆಗೆ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದರು.

       ಗ್ರಾಮಸ್ಥರು ಸೀಮೆ ಎಣ್ಣೆ, ಬರ ಪರಿಹಾರದ ಕುರಿತು ಒತ್ತಾಯ ಮಾಡಿದಾಗ, ಉಜ್ವಲ ಯೋಜನೆಯಡಿ ಹಂತಹಂತವಾಗಿ ಅನಿಲ ಒದಗಿಸುವ ಕ್ರಮ ವಹಿಸಲಾಗಿದೆ. ಸೀಮೆಎಣ್ಣೆಯನ್ನೂ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದ ಅವರು ಬರ ಪರಿಹಾರ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ ಎಂದರು.

        ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಜನಸಾಮಾನ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಹಾಗೂ ಈ ಸೌಲಭ್ಯ ಪಡೆಯಲು ಜನಸಾಮಾನ್ಯರು ಜಿಲ್ಲಾ ಕಚೇರಿ, ತಾಲ್ಲೂಕ ಕಚೇರಿಗಳಿಗೆ ಅಲೆದಾಡಿ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಇಂತಹ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ.

         ಒಂದೇ ಸಭೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರಬಹುದು. ಆದರೆ ಆದಷ್ಟು ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ಸ್ಥಳದಲ್ಲೇ ಸೌಲಭ್ಯ ಮಂಜೂರಾತಿ ಮಾಡಬಹುದಾದಂತಹ ಅರ್ಜಿಗಳಿಗೆ ಈಗಲೇ ಮಂಜೂರಾತಿ ನೀಡಲಾಗುತ್ತದೆ. ಇಲ್ಲಿ ಮಂಜೂರಾತಿ ನೀಡಲಾಗದ ಯೋಜನೆಗಳ ಕುರಿತು ಹಿಂಬರಹ ನೀಡಲಾಗುವುದು. ಹೀಗೆ ವಿವಿಧ ಯೋಜನೆಗಳ ಸೌಲಭ್ಯಗಳು, ಅಹವಾಲುಗಳ ಸ್ವೀಕಾರವನ್ನು ಜನಪ್ರತಿನಿಧಿಗಳ ಮೂಲಕ ನೇರವಾಗಿ ಮಾಡಲಾಗುವುದು.    

           ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವೆಯರಿಗೆ ವೇತನ, ಉಜ್ವಲ ಯೋಜನೆ, ರೈತರಿಗೆ ಉಚಿತ ಪಹಣಿ, ಸ್ತ್ರೀಶಕ್ತಿ ಸಂಘಗಳಿಗೆ ಮಂಜೂರಾದ ಪ್ರೋತ್ಸಾಹಧನ ವಿವರ, ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ವಿತರಣೆ, ವಿಕಲಚೇತನರಿಗೆ ಸೌಲಭ್ಯ, ಸಾಗುವಳಿ ಚೀಟಿ ವಿತರಣೆ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಸುಮಾರು 716 ಫಲಾನುಭವಿಗಳಿಗೆ ಇಂದು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ.

      ಇಂತಹ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಸಭೆಯಲ್ಲಿ, ಹೊನ್ನಾಳಿ ತಾ.ಪಂ.ಅಧ್ಯಕ್ಷೆ ಸುಲೋಚನಮ್ಮ ಪಾಲಾಕ್ಷಪ್ಪ, ಕುಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ದೀಪಾ ಜಗದೀಶ್, ತಾ ಪಂ ಸದಸ್ಯರಾದ ತಿಪ್ಪೇಶಪ್ಪ ಹೆಚ್, ಅಮೃತಬಾಯಿ ಶಂಕ್ರಾನಾಯ್ಕ, ಕುಂದೂರು ಗ್ರಾ ಪಂ ಅಧ್ಯಕ್ಷೆ ಮಂಜಮ್ಮ ಮಂಜಪ್ಪ, ಹೊನ್ನಾಳಿ ತಾಲ್ಲೂಕು ತಹಶೀಲ್ದಾರ್ ತುಷಾರ್ ಬಿ.ಹೊಸಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ತಾ.ಪಂ ಇಓ ಕೆ.ಸಿ.ಮಲ್ಲಿಕಾರ್ಜುನ ಸ್ವಾಗತಿಸಿದರು. ಜಿ.ಜಯರಾಮ್ ನಿರೂಪಿಸಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link