ತುಮಕೂರು:
ಸಾ.ಚಿ.ರಾಜಕುಮಾರ
ವಿಧಾನಸಭಾ ಚುನಾವಣೆ ಘೋಷಣೆಯಾಗಿ ಮುಗಿಯುವ ತನಕ ಬಹಳಷ್ಟು ಮಂದಿ ರಾಜಕೀಯ ಪರಿಧಿಯೊಳಗೆ ಸಿಲುಕಿಬಿಟ್ಟರು. ಕಾರ್ಯಕರ್ತರು, ಮುಖಂಡರು, ಊರಿನ ಜನ ಹೀಗೆ ಪ್ರತಿಯೊಬ್ಬರೂ ಒಂದೊAದು ಪಕ್ಷ, ಒಬ್ಬೊಬ್ಬ ಅಭ್ಯರ್ಥಿ ಹಿಂದೆ ಬಿದ್ದ ಪರಿಣಾಮ ಎಲ್ಲರಿಗೂ ರಾಜಕೀಯವೇ ಉಸಿರಾಗಿತ್ತು. ಈ ನಶೆಯೊಳಗೆ ಬೇರೇನೂ ಕಾಣದಾಗಿತ್ತು.
ಈಗ ಚುನಾವಣೆ ಮುಗಿದಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ರಣ ರಂಗದ ಹೋರಾಟದಲ್ಲಿ ಗೆಲುವು ಸಾಧಿಸಿದವರು ವಿಧಾನಸೌಧಕ್ಕೆ ತೆರಳುತ್ತಾರೆ. ಇನ್ನು ಮುಂದೆ ಹೆಚ್ಚು ದಿನ ಅಲ್ಲಿಯೇ ಇರುತ್ತಾರೆ. ಅವರಿಗಾಗಿ ಕಷ್ಟಪಟ್ಟವರು, ಗೆಲುವಿಗಾಗಿ ಹಗಲು ರಾತ್ರಿ ಓಡಾಡಿದವರು ಒಂದಷ್ಟು ದಿನ ಸಂಭ್ರಮಪಡುತ್ತಾರೆ. ಕಾಲ ಕ್ರಮೇಣ ಎಲ್ಲವೂ ಮರೆತು ಹೋಗುತ್ತವೆ. ಮತ್ತದೇ ಯಥಾಸ್ಥಿತಿ. ಜೋರಾಗಿ ಮಳೆ ಹೊಯ್ದು ಬಿಟ್ಟಂತೆ.
ಚುನಾವಣೆಯ ಸಂದರ್ಭ ಮತ್ತು ಮುಗಿದ ನಂತರವೂ ಊರುಗಳಲ್ಲಿ ರಾಜಕೀಯ ದ್ವೇಷಾಸೂಯೆಗಳು ಮನೆ ಮಾಡುತ್ತವೆ. ಈ ದ್ವೇಷ ಯಾವುದೇ ಸಂದರ್ಭದಲ್ಲಾದರೂ ಸ್ಫೋಟಿಸಬಹುದು. ಒಂದು ಸಣ್ಣ ಗಲಾಟೆಯಾದರೆ ಸಾಕು ಅದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಪರ ವಿರೋಧದ ಗುಂಪುಗಾರಿಕೆ ಸೃಷ್ಟಿಯಾಗುತ್ತದೆ. ಪೊಲೀಸ್ ಠಾಣೆಯವರೆಗೂ ದೂರುಗಳು ರವಾನೆಯಾಗುತ್ತವೆ.
ಕಾರ್ಯಕರ್ತರ ಒತ್ತಡಕ್ಕೆ ಶಾಸಕರ ಪ್ರವೇಶವಾಗುತ್ತದೆ. ಆಡಳಿತ ವ್ಯವಸ್ಥೆ ಸಹಜವಾಗಿ ಅಧಿಕಾರಸ್ಥರ ಮಾತು ಕೇಳುತ್ತದೆ. ಇಲ್ಲಿ ನ್ಯಾಯ, ಅನ್ಯಾಯಗಳ ಪರಾಮರ್ಶೆಗಿಂತ ಅಧಿಕಾರಸ್ಥರ ಗುಂಪು ಮೇಲುಗೈ ಪಡೆಯುತ್ತದೆ. ಗಲಾಟೆ ಗೊಂದಲಗಳು ಮತ್ತೆ ಮತ್ತೆ ಮರುಕಳಿಸುತ್ತೇ ಇರುತ್ತವೆ. ಶಾಸಕನಾದವನಿಗೆ ಕಾರ್ಯಕರ್ತರನ್ನು ಬಿಟ್ಟುಕೊಡುವ ಹಾಗಿಲ್ಲ, ಕೋರ್ಟು-ಕಚೇರಿ ಅಲೆದಾಟಗಳ ಸುಳಿಯಲ್ಲಿಯೇ ಬಹಳ ಜನ ಬದುಕನ್ನು ಹೈರಾಣಾಗಿಸುತ್ತಾರೆ.
ಚುನಾವಣೆಯ ಸಂದರ್ಭದಲ್ಲಿ ಮೆತ್ತಿಕೊಂಡ ಪಕ್ಷಗಾರಿಕೆಯ ಅಮಲು ಬಹುಬೇಗ ಬಿಟ್ಟು ಹೋಗದು. ಕೆಲವರಿಗೆ ಬಿಟ್ಟಿರಲಾರದ ಸ್ಥಿತಿ. ಮುಖಂಡರೆನ್ನಿಸಿಕೊAಡು ಬಾಳಬೇಕು. ಶಾಸಕರಿಗೆ ಹತ್ತಿರದವರಾಗಬೇಕು, ಕೆಲಸ ಕಾರ್ಯಗಳು ತನ್ನಿಂದಲೇ ಆದಂತೆ ಬಿಂಬಿಸಿಕೊಳ್ಳಬೇಕು ಎಂಬೆಲ್ಲಾ ಯೋಚನೆಗಳಿರುತ್ತವೆ. ಪಕ್ಷ ರಾಜಕಾರಣ, ವ್ಯಕ್ತಿ ರಾಜಕಾರಣದ ಐಲು ಹೆಚ್ಚಿದಂತೆಲ್ಲಾ ಅನಾಹುತಗಳಿಗೂ ಕಾರಣವಾಗುತ್ತವೆ. ಊರಿನ ಜಾತ್ರೆ, ಹಬ್ಬ-ಹರಿದಿನ ಏನೇ ಆದರೂ ಗುಂಪುಗಾರಿಕೆ ಸೃಷ್ಟಿಯಾಗಿ ಹೊಡೆದಾಟಗಳು ಶುರುವಾಗುತ್ತವೆ. ಇಂತಹ ಗುಂಪುಗಾರಿಕೆಗೆ ಕಡಿವಾಣ ಹಾಕುವ ಪಂಚಾಯ್ತಿಗಳೂ ಬೆಲೆ ಕಳೆದುಕೊಂಡಿವೆ. ಒಂದು ಊರಿನ ಶಾಂತಿಯ ತೋಟ ಹಾಳಾಗಲು ಈ ರಾಜಕೀಯ ವ್ಯವಸ್ಥೆಯೇ ಅಡಿಗಲ್ಲಾಗಿರುವುದು ವಿಪರ್ಯಾಸ.
ಯಾವುದೇ ಒಂದು ಚುನಾವಣೆ ಅದು ಯುದ್ಧವಲ್ಲ. ಯುದ್ಧದಲ್ಲಿ ಸೋಲು ಗೆಲುವಿಗಿಂತ ಸರ್ವನಾಶವೇ ಹೆಚ್ಚು. ಚುನಾವಣೆಯನ್ನು ಯುದ್ಧವೆಂದು ಪರಿಗಣಿಸಲಾಗುತ್ತಿದೆಯೇ ಹೊರತು ಅದೊಂದು ಕ್ರೀಡೆಯನ್ನಾಗಿ ಪರಿಗಣಿಸುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಸೋತವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಕೆಲಸ ಕಾರ್ಯಗಳಲ್ಲಿ ಪಕ್ಷ ಮತ್ತು ವ್ಯಕ್ತಿ ರಾಜಕಾರಣದಿಂದ ದೂರವೇ ಇರಬೇಕು. ದುರಂತವೆAದರೆ ಯಾವ ಭಾಗದಲ್ಲಿ ಎಷ್ಟು ಮತಗಳು ಬಂದಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿ ಆ ಪ್ರದೇಶವನ್ನು ಅಭಿವೃದ್ಧಿಯನ್ನಾಗಿ ಮಾಡದೆ ನಿರ್ಲಕ್ಷಿಸುತ್ತಾ ಬರುವುದು. ಈ ಸಂಪ್ರದಾಯ ಕೆಟ್ಟ ಪರಂಪರೆಗೆ ನಾಂದಿಹಾಡಿದೆ.
ಯಾವುದೇ ಊರು, ಕೇರಿ ಇರಲಿ, ಪಕ್ಷಾನುಸಾರ ಅಥವಾ ವ್ಯಕ್ತಿಗತವಾಗಿ ಕೆಲವರಿಗೆ ಕಡಿಮೆ ಓಟು ಬೀಳಬಹುದು. ಮತ್ತೆ ಕೆಲವರಿಗೆ ಹೆಚ್ಚು ಮತ ಸಿಗಬಹುದು. ಆ ಊರಿನಲ್ಲಿ ಕಡಿಮೆ ಮತ ಬಿದ್ದಿದೆ ಅಲ್ಲಿಗೇಕೆ ಸೌಲಭ್ಯ ಎಂದರೆ ಆ ಊರಿನಲ್ಲಿ ಇವರನ್ನೇ ನಂಬಿ ಮತ ಹಾಕಿದವರಿಗೂ ದ್ರೋಹ ಮಾಡಿದಂತಲ್ಲವೆ? ಫಲಿತಾಂಶ ಹೊರಬಿದ್ದ ಮೇಲೆ ಇಡೀ ಕ್ಷೇತ್ರದ ಅಧಿಪತಿ ಅಲ್ಲಿನ ಶಾಸಕ. ಈ ಮನೋಧೋರಣೆ ಶಾಸಕರಾದವರಲ್ಲಿ ಮೂಡದೆ ಹೋದರೆ ತಾರತಮ್ಯದ ವಿಷಬೀಜ ಹೆಚ್ಚುತ್ತಲೇ ಹೋಗುತ್ತದೆ. ಮುಂದಿನ ಬಾರಿ ಆಯ್ಕೆಯಾದವರಿಗೂ ಇದು ಪಾಠವಾಗುತ್ತದೆ. ಈ ದುರಂತಗಳು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ.
ಅಭಿವೃದ್ಧಿಯ ವಿಚಾರದಲ್ಲಿ ಗೆದ್ದ ಪ್ರತಿನಿಧಿಗಳ ಮನೋಭಾವ ಈ ರೀತಿಯದ್ದಾದರೆ, ಇವರ ಹಿಂದೆ ಓಡಾಡಿದವರ ಮನಸ್ಥಿತಿ ಯೇನೂ ಭಿನ್ನವಾಗಿರಲಾರದು. ಪಕ್ಷ ಅಥವಾ ಅಭ್ಯರ್ಥಿಮೇಲಿನ ಅತಿಯಾದ ಅಭಿಮಾನದಿಂದಾಗಿ ದ್ವೇಷ ಅಸೂಯೆಗಳ ಗೋಡೆಗಳು ಎತ್ತರಕ್ಕೆ ಬೆಳೆಯುತ್ತವೆ. ಮನಸ್ಸುಗಳು ಘಾಸಿಯಾಗುತ್ತವೆ. ಚುನಾವಣೆ ಎಂದ ಮೇಲೆ ಒಬ್ಬರು ಗೆಲ್ಲಬೇಕು, ಇತರರು ಸೋಲಲೇಬೇಕು. ಇದು ಬಿಟ್ಟು ಬೇರೇನು ಆಗದು. ಇಂದು ಸೋತವನು ಮುಂದೆ ಗೆಲ್ಲಬಹುದು. ಅಥವಾ ಇಂದು ಗೆದ್ದವರು ನಾಳೆ ಸೋಲಬಹುದು. ಆದರೆ ಕಾರ್ಯಕರ್ತರು ಇದನ್ನೇ ಶಾಶ್ವತ ಎಂದು ತಿಳಿದು ತಮ್ಮ ಬದುಕನ್ನು ಬರ್ಬಾದ್ ಮಾಡಿಕೊಳ್ಳುತ್ತಿರುವುದು ದುರಂತ.
ನಮ್ಮಿಂದ ಆಯ್ಕೆಯಾದವರು ಎತ್ತರ, ಎತ್ತರಕ್ಕೆ ಬೆಳೆಯುತ್ತಲೇ ಹೋಗುತ್ತಾರೆ. 5 ವರ್ಷಗಳ ಅವಧಿಯಲ್ಲಿ ಆತನ ಆದಾಯ ಲೆಕ್ಕವಿಲ್ಲದಷ್ಟಾಗುತ್ತದೆ. ಈತನ ಗೆಲುವಿಗೆ ಸಹಕಾರಿಯಾದವರು ಅದೇ ಸ್ಥಿತಿಯಲ್ಲಿ ಇರುತ್ತಾರೆ. ಯಾರೇ ಸೋತರೂ, ಮತ್ಯಾರೋ ಗೆದ್ದರೂ ತಮ್ಮ ದೈನಂದಿನ ಬದುಕಿನಲ್ಲಿ ಸುಧಾರಣೆ ಕಾಣದು. ಅವರಂತೆ ಎತ್ತರಕ್ಕೆ ಏರುವುದೂ ಇಲ್ಲ. ಪಾತಾಳಕ್ಕೆ ಕುಸಿಯುವುದೂ ಇಲ್ಲ. ನಿತ್ಯ ಅದೇ ಅಣ್ಣತಮ್ಮಂದಿರು, ಊರಿನ ಜನರ ನಡುವೆ ಬದುಕು ಸವೆಸಬೇಕು. ಅವರೊಂದಿಗೆ ನಿತ್ಯ ಮುಖಾಮುಖಿಯಾಗಬೇಕು. ನಮ್ಮ ನಮ್ಮ ಹೊಟ್ಟೆಪಾಡು ನೋಡಿಕೊಳ್ಳಬೇಕು. ಈ ವಾಸ್ತವತೆಯನ್ನು ಮರೆತು ಊರನ್ನೆ ಎದುರು ಹಾಕಿಕೊಂಡರೆ ಅದರಿಂದ ಮಾನಸಿಕ ಸುಖ-ಶಾಂತಿ ಸಾಧ್ಯವೇ.
ತನ್ನ ಗ್ರಾಮದೊಳಗೆ ನಿತ್ಯ ಸಂಪರ್ಕ ಸೇತುವೆಯಾಗಬೇಕಾದ ಜನಸಾಮಾನ್ಯರು ರಾಜಕಾರಣದಿಂದಾಗಿ ಅಡ್ಡಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಕೆಂಡ ಕಾರುತ್ತಾರೆ. ವರ್ಷಾನುಗಟ್ಟಲೆ ದ್ವೇಷ ಸಾಧಿಸುತ್ತಾರೆ. ಇದರಿಂದಾಗಿ ದೈಹಿಕ ಹಲ್ಲೆಗೂ ಒಳಗಾಗುತ್ತಾರೆ. ಆದರೆ ಇವರಿಂದ ಗೆದ್ದು ಶಾಸಕರು, ಸಚಿವರಾದವರು ಈ ಎಲ್ಲ ಜಂಜಾಟಗಳಿಂದ ದೂರವೇ ಇರುತ್ತಾರೆ.
ನಾಯಕರಾದವರು ನಾಳೆಯ ದಿನ ಎಲ್ಲರೊಂದಿಗೆ ಸಹಬಾಳ್ವೆಯಿಂದಲೇ ಬದುಕುತ್ತಾರೆ. ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಾರೆ. ನಿನ್ನೆಯವರೆಗೆ ವಾಚಾಮಗೋಚರವಾಗಿ ನಿಂದಿಸುತ್ತಿದ್ದವರನ್ನು ನಾಳೆ ಹೊಗಳುತ್ತಾರೆ. ಇದೇ ರಾಜಕೀಯ. ಇದರ ಗಂಧ-ಗಾಳಿ ತಿಳಿಯದ ಜನ ಬೆಪ್ಪಾಗುತ್ತಾರೆ. ನೇತಾರ ಅಲ್ಲಿ ವಿಹರಿಸುತ್ತಿದ್ದರೆ, ಸಾಮಾನ್ಯ ಜನ ಜಗಳವಾಡಿಕೊಂಡು ಬಟ್ಟೆ ಹರಿದು ಹಾಕಿಕೊಳ್ಳುತ್ತಾರೆ.
ಮತದಾನದ ದಿನದವರೆಗೆ ನಾವೆಲ್ಲ ಒಂದು ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಸೇರಿದವರು ಎಂಬ ಮನೋಭಾವನೆ ಇರಬೇಕಾದ್ದು ಸಹಜ. ಮತದಾನ ಮುಗಿದ ಕೂಡಲೇ ನಾವೆಲ್ಲ ಈ ಸಮಾಜದ ಸಾರ್ವಜನಿಕರು ಎಂಬ ಮನೋಭಾವ ಮೂಡಬೇಕು. ರಾಜಕೀಯ ನಾಯಕರುಗಳಿಂದ ಉಂಟಾದ ಜಾತಿ, ಮತ, ಧರ್ಮ, ಪಕ್ಷ ಇವೆಲ್ಲವನ್ನೂ ಚುನಾವಣೆಯ ನಂತರ ಅಳಿಸಿ ಹಾಕಬೇಕಲ್ಲವೇ. ಚುನಾವಣಾ ಪೂರ್ವದಲ್ಲ್ಲಿದ್ದ ಸಹಬಾಳ್ವೆ ಮರುಕಳಿಸುವಂತಾಗಬೇಕಲ್ಲವೇ..? ಜನಪ್ರತಿನಿಧಿಗಳಿಗೂ ಇದು ಮಾದರಿಯಾಗಬೇಕು
ಅಧಿಕಾರ ಸಿಕ್ಕಿದೆ ಎಂದು ದ್ವೇ಼ಷ ರಾಜಕಾರಣ ಮಾಡ ಹೊರಟರೆ ಜನ ಸುಮ್ಮನಿರಲಾರರು. ಎಂತಹ ಘಟಾನುಘಟಿಯಾದರೂ ಸರಿ ನೀರು ಕುಡಿಸುತ್ತಾರೆ. ಮೂಲಭೂತ ಸೌಲಭ್ಯಗಳಿಗೆ ಬೇಡಿಕೆ ಇಟ್ಟು ಜನಪ್ರತಿನಿಧಿ ಮನೆಗೆ ಹೋದರೆ ವಾಚಾಮಗೋಚರ ಬೈಯುವುದು, ನೀವು ಓಟು ಹಾಕಿಲ್ಲ, ಇಲ್ಲಿಗೇಕೆ ಬಂದಿರಿ ಎನ್ನುವ ಅಹಂಕಾರದ ನಡೆ ಕೆಲವು ವರ್ಷಗಳ ಕಾಲ ಮಾತ್ರ. ಹೀಗೆ ನಡೆದುಕೊಂಡವರನ್ನು ಜನ ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ. ಗೆದ್ದ ಮೇಲೆ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಆಲಿಸುವ, ಸಮಸ್ಯೆಗಳಿಗೆ ಪರಿಹಾರ ಹುಡುಕುವ, ಗಲಾಟೆ ಗೊಂದಲಗಳಿಗೆ ಅವಕಾಶ ನೀಡದ ಸಹೃದಯಿ ಶಾಸಕರನ್ನು ಜನ ಯಾವತ್ತೂ ಕೈಬಿಡುವುದಿಲ್ಲ,
ಸಾಮರಸ್ಯದ ಕಡೆ ಗಮನಹರಿಸಿ
ಚುನಾವಣೆ ಮುಗಿದ ಬಳಿಕ ಕ್ಷೇತ್ರಗಳ ಅಭಿವೃದ್ದಿ ಮುಖ್ಯವಾಗಬೇಕು. ರಾಜಕೀಯ ದ್ವೇಷಾಸೂಯೆಗಳು ಕೊನೆಗೊಳ್ಳಬೇಕು. ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರö್ಯ ಮತದಾರನಿಗೆ ಇರುತ್ತದೆ. ಆ ಸ್ವಾತಂತ್ರö್ಯ ಕಸಿಯುವ ಪ್ರಯತ್ನ ಆಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವ, ಸಾಮರಸ್ಯದ ಕಡೆಗೆ ಒತ್ತು ನೀಡುವ ಮನಸ್ಥಿತಿ ಗೆದ್ದವರಲ್ಲಿ ಬರಬೇಕು, ಆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಬೇಕು.
– ಪ್ರೊ. ಕೆ. ದೊರೆರಾಜ್, ಪ್ರಗತಿಪರ ಚಿಂತಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ