ಬೆಂಗಳೂರು
ಅಭಿವೃದ್ಧಿ ಕಾರ್ಯಗಳು ಕುಂಠಿತವಾದರೆ ಅದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ನೇರೆ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ನಡೆದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಎಂಟಕ್ಕೂ ಹೆಚ್ಚು ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಛಳಿ ಬಿಡಿಸಿದರು. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಲೋಪವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಅಪೂರ್ಣಗೊಂಡಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಯಾವುದೇ ಸಬೂಬು, ಗುತ್ತಿಗೆದಾರರ ವಿಳಂಬ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದನ್ನು ಕೇಳುವುದಿಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತಿ ವಾರಕ್ಕೆ ಇಲ್ಲವೇ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆಯೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಅಭಿವೃದ್ಧಿ ಕೆಲಗಳಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ. ಕಾಮಗಾರಿಗಳ ವಿಚಾರದಲ್ಲಿ ವೈಫಲ್ಯವಾದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಈ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದರು.
ಈ ಹಿಂದೆ ಜೂನ್‍ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೆಲ ಜಿ.ಪಂ.ಗಳಿಗೆ ಗುರಿ ನಿಗದಿ ಮಾಡಿದ್ದೆ. ನಿಗದಿ ಮಾಡಿದ್ದನ್ನು ಪ್ರಸ್ತಾಪಿಸಿದ ಅವರು, ಕೇವಲ ಬೆರಳೆಣಿಕೆಯಷ್ಟು ಜಿ.ಪಂ.ಗಳನ್ನು ಹೊರತು ಪಡಿಸಿದರೆ ಬಹುತೇಕ ಜಿಲ್ಲಾ ಪಂಚಾಯ್ತಿಗಳು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಹಿಂದೆ ಇವೆ. ಕೂಡಲೇ ಯಾವುದೇ ನೆಪ, ಸಬೂಬು ಹೇಳದೆ ಕಾಮಗಾರಿಗಳ ಅನುಷ್ಠಾನಕ್ಕೆ ಗಮನ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ