ಅಭಿವೃದ್ಧಿ ನಿಗಮಕ್ಕೆ ಡಿ.ಎಂ. ನೇಮಕಕ್ಕೆ ಆಗ್ರಹ

 ದಾವಣಗೆರೆ

       ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ ಜಿಲ್ಲಾ ವ್ಯವಸ್ಥಾಪಕರನ್ನು ಖಾಯಂ ಆಗಿ ನೇಮಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ಗುರುವಾರ ನಿಗಮದ ಕಚೇರಿಗೆ ಬೀಗ ಜಡಿದು, ನಂತರ ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

        ನಗರದ ಜಯದೇವ ವೃತ್ತದಿಂದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಕುರುಬರ ಹಾಸ್ಟೇಲ್ ಆವರಣದಲ್ಲಿರುವ ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಕಚೇರಿಗೆ ಬೀಗ ಜಡಿದು, ನಂತರ ಬೈಕ್ ರ್ಯಾಲಿಯ ಮೂಲಕ ಜಿಲ್ಲಾ ಪಂಚಾಯತ್ ಕಚೇರಿಗೆ ತೆರಳಿ ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಸಿಇಒ ಹಚ್.ಬಸವರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ನಿಗಮಕ್ಕೆ ಜಿಲ್ಲಾ ವ್ಯವಸ್ಥಾಪಕರು ಇಲ್ಲದ ಕಾರಣ ಸರ್ಕಾರದಿಂದ ಬಂದ ಅನೇಕ ಯೋಜನೆ, ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಚೇರಿಗೆ ಸಂಬಂಧಿಸಿದ ಕೆಲಸ, ಕಾರ್ಯಗಳ ಬಗ್ಗೆ ಕೇಳಲು ಹೋದರೆ, ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡದೇ, ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿದರು.

         ಬೇರೆ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ, ನಿಗಮದ ಕಚೇರಿಯಲ್ಲಿ ಯಾವುದೇ ಕೆಲಸವಾಗದೇ ಬರಿಗೈನಲ್ಲಿ ವಾಪಾಸ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ನಿಗಮದಿಂದ ನೀಡುವ ಗಂಗಾ ಕಲ್ಯಾಣ, ಚೈತನ್ಯ ಯೋಜನೆಯಡಿ ಫಲಾನುಭವಿಗಳಿಗೆ ಸ್ಟಾರ್ಟರ್, ಮೋಟಾರ್ ವಿತರಿಸಲಾಗಿದೆ. ಆದರೆ, ಕೊಳವೆಬಾವಿಗೆ ಸಂಬಂಧಿಸಿದ ಉಪಕರಣಗಳನ್ನು ಇನ್ನೂ ಪೂರೈಸಿಲ್ಲ ಎಂದು ಕಿಡಿಕಾರಿದರು.

         ಚೈತನ್ಯ ಯೋಜನೆಯಡಿ ಅರ್ಜಿಗಳಿಗೆ ಜಿಲ್ಲಾ ವ್ಯವಸ್ಥಾಪಕರ ಸಹಿಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಸಿಬ್ಬಂದಿಗಳು ಡಿಎಂ ಬಂದಿಲ್ಲವೆಂಬ ಸಬೂಬು ಹೇಳಿ ಸಾರ್ವಜನಿಕರನ್ನು ಸಾಗುಹಾಕುತ್ತಿದ್ದಾರೆ. ಅಲ್ಲದೆ, ನಿಮಗದಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಮಧ್ಯವರ್ತಿಗಳ ಜೊತೆಗೆ ನಿಗಮದ ಸಿಬ್ಬಂದಿಗಳು ಮಿಲಾಪಿಯಾಗಿದ್ದಾರೆ. ಆದ್ದರಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳೇ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

          ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪದೇ, ನಿಗಮದ ಕೆಲ ಸಿಬ್ಬಂದಿ, ಮಧ್ಯವರ್ತಿಗಳಿಂದಾಗಿ ಅನ್ಯರ ಪಾಲಾಗುತ್ತಿವೆ. ಆದ್ದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ತಕ್ಷಣವೇ ನಿಗಮಕ್ಕೆ ಖಾಯಂ ಆಗಿ ಜಿಲ್ಲಾ ವ್ಯವಸ್ಥಾಪಕರನ್ನು ನೇಮಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು. ನಿಗಮದ ಕಚೇರಿಯಲ್ಲಿ ಬಾಕಿ ಉಳಿದ ಕಡತಗಳನ್ನು ವಿಲೇ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ, ಮುಖಂಡರಾದ ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಚಿಕ್ಕಮಲ್ಲನಹೊಳೆ ಟಿ.ಚಿರಂಜೀವಿ, ಕೋಲ್ಕುಂಟೆ ಬಿ.ಬಸಣ್ಣ, ಯಲೋದಹಳ್ಳಿ ರವಿಕುಮಾರ, ಇಂಗಿಳಗುಂದಿ ದುರುಗಪ್ಪ, ಆಲೂರು ಪರಶುರಾಮ, ಚಿಕ್ಕಬೂದಿಹಾಳ್ ಭಗತ್ ಸಿಂಹ, ಕಾಡಜ್ಜಿ ಎಚ್.ಪ್ರಕಾಶ, ಹುಚ್ಚವ್ವನಹಳ್ಳಿ ವಿ.ಎನ್.ಪ್ರಕಾಶ, ಕೋಲ್ಕುಂಟೆ ಉಚ್ಚೆಂಗೆಪ್ಪ, ಗುಮ್ಮನೂರು ಕೃಷ್ಣಮೂರ್ತಿ, ಉಪ್ಪನಾಯ್ಕನಹಳ್ಳಿ ಉಮೇಶ, ಯರನಾಯಕನಹಳ್ಳಿ ರುದ್ರಣ್ಣ, ಹೂವಿನಮಡು ನಾಗರಾಜ, ಆಲೂರುಹಟ್ಟಿ ಲಕ್ಷ್ಮಣ ನಾಯ್ಕ, ದೊಣ್ಣೆಹಳ್ಳಿ ಲೋಕೇಶ, ಶ್ರೀನಿವಾಸ, ಅಣ್ಣಪ್ಪ, ಬಿ.ಸತೀಶ ಮತ್ತಿತರರು ಭಾಗಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link