ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವೂ ಮಾನವ ಹಕ್ಕುಗಳ ಉಲ್ಲಂಘನೆ; ಪ್ರೊ.ಯಾದವರೆಡ್ಡಿ

ಚಿತ್ರದುರ್ಗ:

     ದಲಿತರು, ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಅಷ್ಟೇ ಅಲ್ಲದೇ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ದಮನವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೋ. ಜೆ. ಯಾದವರೆಡ್ಡಿ ಅಭಿಪ್ರಾಯಪಟ್ಟರು.

      ಐ.ಯು.ಡಿ.ಪಿ. ಲೇಔಟ್‍ನಲ್ಲಿರುವ ಎ.ಜೆ. ಚರ್ಚಿನಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಹೋಫ್ ಇಂಡಿಯಾ ಫೌಂಡೇಷನ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ಕುರಿತು ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

      ಮಾನವ ಹಕ್ಕುಗಳ ಉಲ್ಲಂಘನೆ ಮನುಷ್ಯ ತಾಯಿಯ ಗರ್ಭದಲ್ಲೇ ಇರುವಾಗಲೇ ಆರಂಭವಾಗುತ್ತದೆ. ಗರ್ಭಪಾತಮಾಡುವ ಮೂಲಕ ಉಲ್ಲಂಘನೆಯನ್ನು ಸ್ಪಷ್ಟಪಡಿಸಲಾಗುತ್ತದೆ. ತದನಂತರ ಪ್ರತಿ ಕ್ಷಣಕ್ಷಣಕ್ಕೂ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆದಿರುತ್ತದೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವು ನಿರಂತರವಾಗಿ ನಡೆದಿದ್ದು, ದೇಶದಲ್ಲಿ ಅಭಿವ್ಯಕ್ತಿಯನ್ನು ಕಗ್ಗೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮಾನವ ಹಕ್ಕುಗಳ ದೇಶ ಮತ್ತು ರಾಜ್ಯದಲ್ಲಿ ವೈಯಕ್ತಿಕವಾಗಿ ನಡೆಯುವಂತಹ ಹಂತಕ್ಕೆ ತಲುಪಿದ್ದು, ವಿಷಾದಕರ ಸಂಗತಿ ಎಂದರು.

      ಅಹಿಂದ ಬಳಗದ ಅಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಮಾತನಾಡಿ, ಮಾನವ ಹಕ್ಕುಗಳ ಹರಣವು ದೇಶ ವ್ಯಾಪಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆದಿದ್ದು, ನಿರಂತರವಾಗಿ ಶೋಷಿತ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಸಲಾಗುತ್ತಿದೆ ಎಂದರು.
ಸಂವಿಧಾನ ಈ ದೇಶದ ಬಹುಸಂಖ್ಯಾತರ ಬಹುತ್ವವನ್ನು ಕಾಪಾಡುವಂತಹ ಮತ್ತು ಹಕ್ಕುಗಳನ್ನು ಕಲ್ಪಿಸುವಂತಹ ಗ್ರಂಥವಾಗಿದ್ದು, ಇಂತಹ ಸಂವಿಧಾನವನ್ನು ನಾಶಮಾಡುವಂತಹ ಮಾತುಗಳು ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

     ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಫಾದರ್ ಎಂ.ಎಸ್. ರಾಜು ಮಾತನಾಡಿ, ಕ್ರೈಸ್ತರು ಚರ್ಚುಗಳಲ್ಲಿ ಪ್ರಾರ್ಥನೆಯಂತಹ ಸೇವೆಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅವರುಗಳ ಮೇಲೆ ದೌರ್ಜನ್ಯ, ಹತ್ಯೆಯಂತಹ ಘಟನೆಗಳು ಜರುಗುವುದು ಅಮಾನವೀಯ ಸಂಗತಿಗಳಾಗಿದ್ದು, ಮಾನವ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯ ಎಂದು ಪ್ರತಿಪಾದನೆ ಮಾಡಿದರು.

    ಮಾನವ ಹಕ್ಕುಗಳ ಸಂವಾದ ಸಮಾರಂಭದಲ್ಲಿ ಕ್ರೈಸ್ತ ಕಾಲೇಜಿನ ಪ್ರಾಚಾರ್ಯ ಸುಜಯ್ ಕುಮಾರ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸಮಿತಿಯ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್ ಅಹಿಂದ ಬಳಗದ ನಾಗಣ್ಣ, ರಾಮಲಿಂಗಪ್ಪ, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap