ಕಾಂಗ್ರೆಸ್ ಪಕ್ಷದವರೇ ಸೇರಿಕೊಂಡು ಉತ್ಸವ ಮಾಡುತ್ತಿದ್ದಾರೆ : ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ರವರ 75ರ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಗೊಂದಲ ತೀವ್ರಗೊಳ್ಳುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಉಪಹಾರಕ್ಕೆ ಆಗಮಿಸಿ ಕೆಲಹೊತ್ತು ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.
ಉಪಹಾರದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದರಾಮೋತ್ಸವ ಎಂಬುದು ಮಾಧ್ಯಮಗಳು ಕಟ್ಟಿದ್ದು, ನನ್ನ 75ನೇ ವರ್ಷದ ಹುಟ್ಟುಹಬ್ಬ. ನಮ್ಮ ಪಕ್ಷದವರೇ ಇದನ್ನು ಸೇರಿ ಮಾಡುತ್ತಿದ್ದಾರೆ. 75 ವರ್ಷ ತುಂಬಿದ ಕಾರಣ, ಅದನ್ನು ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉತ್ಸವ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳೇ ಇದ್ದಾರೆ, ಎಲ್ಲರೂ ಸೇರಿ ಒಟ್ಟಾಗಿ ಅಮೃತ ಮಹೋತ್ಸವ ಆಚರಿಸಲು ತಯಾರಿ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನನ್ನ ಹುಟ್ಟುಹಬ್ಬವನ್ಬ ಪಕ್ಷದವರೇ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಆರ್ ವಿ ದೇಶಪಾಂಡೆ ಇದಕ್ಕೆ ಅಧ್ಯಕ್ಷ. ಪಕ್ಷದ ವೇದಿಕೆ ಅಲ್ಲದೇ ಇದ್ದರೂ ಪಕ್ಷದವರೇ ಮಾಡುತ್ತಿದ್ದಾರೆ. ನಾನು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆದಿದ್ದೇನೆ, ಬಿ ಕೆ ಹರಿಪ್ರಸಾದ್, ಡಿ ಕೆ ಶಿವಕುಮಾರ್, ಮುನಿಯಪ್ಪ ಎಲ್ಲರಿಗೂ ಕರೆದಿದ್ದೇನೆ. ನಾನು ಇದನ್ನ ಸಿದ್ದರಾಮೋತ್ಸವ ಎಂದಿಲ್ಲ ಎಂದಿದ್ದಾರೆ.
ನನ್ನ 75 ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಮಾಡಲಾಗುತ್ತಿದೆ, ಇದು ನನ್ನ ಜೀವನದ ಮೈಲ್ ಸ್ಟೋನ್ ಅದಕ್ಕೆ ಅಮೃತ ಮಹೋತ್ಸವ ಅಂದಿದ್ದಾರೆ. ಇದಕ್ಕೆ ಪಕ್ಷದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರ ಆಕ್ಷೇಪವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ರಾಜಕೀಯ ಉದ್ದೇಶ ಇದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಸಂದೇಶ ಇದ್ದೇ ಇರುತ್ತದೆ. ನಾನು ಸನ್ಯಾಸಿ ಅಲ್ಲ. ಡಿ ಕೆ ಶಿವಕುಮಾರ್ ಸಹ ಸನ್ಯಾಸಿ ಅಲ್ಲ, ರಾಹುಲ್ ಗಾಂಧಿ ಸಹ ಸನ್ಯಾಸಿ ಅಲ್ಲ. ನಮ್ಮ ಕಾಲದ ಸಾಧನೆ ತೋರಿಸುತ್ತೇವೆ. ಅಂದರೆ ಅದರಲ್ಲಿ ರಾಜಕೀಯ ಇದ್ದೇ ಇರುತ್ತದೆ. ನನ್ನ ಜೀವನ ಸಾಧನೆ ಅಂದರೆ ಅದು ರಾಜಕೀಯ ಎಂದಿದ್ದಾರೆ.