ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿ

ದಾವಣಗೆರೆ :

      ಬರುವ ಅ.24ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಶ್ರೀ ಮಹಿರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾ ಮಟ್ಟದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಸಂಬಂಧ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಚರ್ಚಿಸಲು ಮಂಗಳವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿಕೆ ಮಾಡಬೇಕು. ನಿಗದಿತ ಅವಧಿಗೆ ವೇದಿಕೆ ಕಾರ್ಯಕ್ರಮವನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮಾಜ ಬಾಂಧವರು ನಡೆಸುವ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಮೆರವಣಿಗೆ ಹೊರಡುವ ಬಗ್ಗೆ ರೂಟ್ ಮ್ಯಾಪ್ ಹಾಕಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮದ ರೂಪುರೇಷೆ ಹಾಕಿಕೊಳ್ಳಲು ತಿಳಿಸಿದರು.

     ಕಾರ್ಯಕ್ರಮದಲ್ಲಿ ಮಹಿರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಲು ಮಹಿರ್ಷಿಯವರ ಕುರಿತು ಅಧ್ಯಯನ ಮಾಡಿರುವ ವಿದ್ವಾಂಸರನ್ನು ಆಹ್ವಾನಿಸಬೇಕು. ಜಯಂತಿಯನ್ನು ಗುಂಡಿ ಕಲ್ಯಾಣ ಮಂಟಪ, ಶಾಮನೂರು ಕಲ್ಯಾಣ ಮಂಟಪ, ನೌಕರರ ಭವನ ಇವುಗಳಲ್ಲಿ ಯಾವುದು ಲಭ್ಯವಾಗುವುದೋ ಅಲ್ಲಿ ನಡೆಸಬಹುದೆಂದು ಚರ್ಚೆಯಲ್ಲಿ ಮುಖಂಡರು ತಿಳಿಸಿದರು.

      ವೇದಿಕೆ ನಿರ್ಮಾಣದ ಕಾರ್ಯದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆಯೊಂದಿಗೆ ಮಹಾನಗರಪಾಲಿಕೆ, ತೋಟಗಾರಿಕೆ ಇಲಾಖೆಗಳು ಸಹಕರಿಸಬೇಕು. ಮೆರವಣಿಗೆ ವೇಳೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ವಿವಿಧ ಕಲಾ ತಂಡಗಳನ್ನು ನೀಡುವಂತೆ ಸಮಾಜದವರು ಕೋರಿರುವಂತೆ ವ್ಯವಸ್ಥೆ ಮಾಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ಮಹರ್ಷಿ ವಾಲ್ಮೀಕಿ ಜಯಂತಿ ಕುರಿತು ನಗರದ ವಿವಿಧೆಡೆ ಫ್ಲೆಕ್ಸ್ ಅಳವಡಿಕೆ, ಲಘು ಉಪಹಾರದ ಜವಾಬ್ದಾರಿಯನ್ನು ಜಿಲ್ಲಾ ಪರಿಶಿಷ್ಟ ವರ್ಗ ಇಲಾಖೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ವಹಿಸಿದರು.

    ವಾಲ್ಮೀಕಿ ಸಮಾಜದ ಮುಖಂಡ ಹೂವಿನಮಡು ಚಂದ್ರಪ್ಪ ಮಾತನಾಡಿ, ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಈಗಾಗಲೇ ಸ್ಥಳದ ಬಗ್ಗೆ ಚರ್ಚಿಸಿ ಸ್ಥಳವನ್ನು ಕಾಯ್ದಿರಿಸಬೇಕಿತ್ತು. ಇಷ್ಟು ತಡವಾದರೆ ನಗರದಲ್ಲಿ ಕಲ್ಯಾಣ ಮಂಟಪಗಳು ಸಿಗುವುದು ಕಷ್ಟ. ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಇಷ್ಟು ತಡವಾಗಿ ಸ್ಥಳ ನಿಗದಿ ಮಾಡುವುದು ಬೇಡವೆಂದರು. ಹಾಗೂ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಅಧ್ಯಯನ ಮಾಡಿ ತಿಳಿದವರಿಂದ ಉಪನ್ಯಾಸ ಕೊಡಿಸಬೇಕೆಂದು ಮನವಿ ಮಾಡಿದರು.

     ವಾಲ್ಮೀಕಿ ಸಮಾಜದ ಮಾಜಿ ತಾಲ್ಲೂಕು ಅಧ್ಯಕ್ಷ ಗುಮ್ಮನೂರು ಮಲ್ಲಿಕಾರ್ಜುನ ಮಾತನಾಡಿ, 2016 ರಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ವೇದಿಕೆಗೆ ಯಾವುದೇ ವಾಲ್ಮೀಕಿ ಪದಾಧಿಕಾರಿಗಳನ್ನು ಕರೆದಿರಲಿಲ್ಲ. ಈ ಬಾರಿ ಹಾಗೆ ಆಗದಂತೆ ಸಮಾಜದ ಅಧ್ಯಕ್ಷರು ಅಥವಾ ಮುಖಂಡರನ್ನು ವೇದಿಕೆಗೆ ಕರೆಯಬೇಕೆಂದು ಒತ್ತಾಯಿಸಿದರು. ಇದಕ್ಕೆ ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಮಾಹಿತಿಯನ್ನು ಮೊದಲೇ ನೀಡಬೇಕು ಎಂದರು.

     ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ವಿಜಯಶ್ರೀ ಮಾತನಾಡಿ, ಮಹಿಳಾ ಪ್ರತಿಭೆಯನ್ನು ಗುರುತಿಸಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪುರಸ್ಕರಿಸಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ಜಯಂತಿ ಕಾರ್ಯಕ್ರಮದಲ್ಲಿ ಈ ರೀತಿಯ ಪುರಸ್ಕಾರ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.

    ಆದರೆ ಈ ಕುರಿತು ನೀವು ಮನವಿ ನೀಡಿದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಸಭೆಯಲ್ಲಿ ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಬಿ.ಹಾಲಪ್ಪ, ಜಿ ಪಂ ಸದಸ್ಯರುಗಳಾದ ಓಬಳಪ್ಪ, ಲೋಕೋಶಪ್ಪ, ಇತರೆ ಮುಖಂಡರು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೇವೇಂದ್ರಪ್ಪ, ತಹಶೀಲ್ದಾರ್ ಸಂತೋಷ್‍ಕುಮಾರ್, ಮನ್ಸೂರ್ ಭಾಷಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಡಿಡಿಪಿಯು ಶೇಖರಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇತರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link