ಹುಳಿಯಾರು:
ಗಾಂಧಿ ಪಥ-ಗ್ರಾಮ ಪಥ ಯೋಜನೆಯಡಿ ನಡೆಯುತ್ತಿರುವ ಹುಳಿಯಾರು ಹೋಬಳಿಯ ಸೋಮನಹಳ್ಳಿಯಿಂದ ದಸೂಡಿ ಕೆಇಬಿ ವರೆಗಿನ ರಸ್ತೆ ಕಾಮಗಾರಿ ಅನುಷ್ಠಾನ ಅವಧಿ ಪೂರ್ಣಗೊಂಡರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಸೋಮನಹಳ್ಳಿ ನಿವಾಸಿ ಲಿಂಗರಾಜು ಆರೋಪಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕರ್ನಾಟಕ ಗ್ರಾಮಿಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಬರೋಬ್ಬರಿ 2.70 ಕೋಟಿ ರೂ.ವೆಚ್ಚದಲ್ಲಿ 4.60 ಕಿಮೀನ ಈ ಕಾಮಗಾರಿಯನ್ನು 2017 ರ ಸೆಪ್ಟೆಂಬರ್ ಮಾಹೆಯಲ್ಲಿ ಆರಂಭಿಸಿ 2018 ರ ಆಗಸ್ಟ್ ಮಾಹೆಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರ ತುಮಕೂರಿನ ಸಿ.ಆರ್.ಹರೀಶ್ ಅವರಿಗೆ ನೀಡಲಾಗಿತ್ತು.
ಆದರೆ ಕಾಮಗಾರಿ ಅನುಷ್ಠಾನ ಅವಧಿ ಪೂರ್ಣಗೊಂಡರೂ ಇನ್ನೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಕೆಲಕಡೆ ಡಾಂಬರ್ ಹಾಗೂ ಕೆಲಕಡೆ ಸಿಮೆಂಟ್ ರಸ್ತೆ ಮಾಡಬೇಕಿದ್ದರೂ ಕಾಮಗಾರಿ ಆರಂಭದ ವೇಳೆ ರಸ್ತೆಗೆ ಮಣ್ಣು ಹಾಕಿರುವುದು ಬಿಟ್ಟರೆ ಉಳಿದ ಕಾಮಗಾರಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ 12 ಸೇತುವೆಗಳು ಹಾಗೂ 33 ಸಣ್ಣ ಸೇತುವೆಗಳನ್ನು ನಿರ್ಮಿಸಬೇಕಿದ್ದರೂ ಕೆಲವೆಡೆ ಸೇತುವೆ ನಿರ್ಮಿಸಿಲ್ಲ ಎಂದು ಆರೋಪಿಸಿದ್ದಾರೆ.
ರಸ್ತೆ ಕಾಮಗಾರಿ ಮಾಡುವ ನೆಪದಲ್ಲಿ ಕೇವಲ ರಸ್ತೆಗೆ ಮಣ್ಣು ಚೆಲ್ಲಿ ಸುಮ್ಮನಾಗಿರುವುದರಿಂದ ಇಲ್ಲಿನವರಿಗೆ ಭಾರಿ ತೊಂದರೆ ಸೃಷ್ಠಿಯಾಗಿದೆ. ವಾಹನಸವಾರರು ಹಾಗೂ ಪಾದಚಾರಿಗಳು ಧೂಳಿನಲ್ಲಿ ಸಂಚರಿಸುವ ಯಾತನೆ ಒಂದೆಡೆಯಾದರೆ ಈ ರಸ್ತೆಯ ಅಕ್ಕಪಕ್ಕದ ಮನೆಯವರಿಗೆ, ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ಧೂಳು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವ ಅನಿವಾರ್ಯ ಕರ್ಮ ಬಂದಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಮಳೆ ಬಂದರಂತೂ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು ಓಡಾಡುವುದೇ ದುತ್ಸರವಾಗುತ್ತದೆ. ಅಲ್ಲದೆ ಕಾಮಗಾರಿ ಪೂರ್ಣಗೊಂಡ ನಂತರ 5 ವರ್ಷ ನಿರ್ವಹಣೆ ಸಹ ಮಾಡಿ ಮರು ಡಾಂಬರೀಕರಣ ಮಾಡವ ಹೊಣೆ ಗುತ್ತಿಗೆದಾರರದಾಗಿದೆ. ಹಾಗಾಗಿ ಇನ್ನಾದರೂ ಕಾಮಗಾರಿಗೆ ಚುರುಕು ಮುಟ್ಟಿಸಿ ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಜೊತೆಗೆ ಹಲವರು ವರ್ಷ ಬಾಳಿಕೆ ಬರುವಂತೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
