ಬೆಂಗಳೂರು:
ಹಿಂದಿನ ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆಯಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಾರಿಗೆ ಬಂದಿರಲಿಲ್ಲ ಎಂದು ಬೆಂಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚುನಾವಣೆ ಮುಗಿದ ನಂತರ ಇಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಜಾರಿಗೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ನಮ್ಮ ಸರ್ಕಾರದ ಬಡವರು, ಮಧ್ಯಮ ವರ್ಗದವರನ್ನು ರಕ್ಷಿಸುತ್ತಿದೆ. ಬಡವರು ಬಿಲ್ ಕಟ್ಟುವುದೇ ಬೇಡ ಎಂದು ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ಈಗ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಿದೆ ಎಂದು ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿವೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಇಂಧನ ಸಚಿವರು ಸ್ಪಷ್ಟನೆ ನೀಡಿದರು.
ಗ್ರಾಹಕರ ಸರಾಸರಿ ವಿದ್ಯುತ್ ಬಳಕೆ ಮತ್ತು 10% 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಅದಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗುತ್ತದೆ. ನಿಗದಿತ ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರು ಹೆಚ್ಚುವರಿಯಾಗಿ ಬಳಸಿದ ಘಟಕಗಳಿಗೆ ಹಣ ಪಾವತಿಸಬೇಕಾಗುತ್ತದೆ. ಅದರಲ್ಲಿ ಶೇ.9ರಷ್ಟು ತೆರಿಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 200 ಯೂನಿಟ್ ಗಿಂತ ಕಡಿಮೆ ಬಳಕೆದಾರರು 2.16 ಕೋಟಿ ಇದ್ದಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾಸಿಂಧು ಆ್ಯಪ್ ನಲ್ಲಿ ಜನ ಅರ್ಜಿ ಹಾಕಬೇಕು. ಆಧಾರ್ ಕಾರ್ಡ್ ಆರ್ .ಆರ್ ನಂಬರ್ ಗೆ ಲಿಂಕ್ ಆಗಿರಬೇಕು. ಫ್ರಿ ವಿದ್ಯುತ್ ಗೆ ದಾಖಲೆಗಳನ್ನು ನೀಡಬೇಕು ಎಂದರು.
ಜುಲೈ ತಿಂಗಳಿನ ಬಿಲ್ ಆಗಸ್ಟ್ನಲ್ಲಿ ಪಾವತಿ ಮಾಡುವುದು ಬೇಡ. 2 ಲಕ್ಷ ಗ್ರಾಹಕರು ಮಾತ್ರ 200 ಯೂನಿಟ್ ಗಿಂತ ಹೆಚ್ಚಾಗಿ ಬಳಕೆ ಮಾಡ್ತಾರೆ. 2 ಕೋಟಿ 14 ಲಕ್ಷ ಗ್ರಾಹಕರಿಗೆ ಈ ಯೋಜನೆ ಲಾಭ ಸಿಗುತ್ತದೆ ಎಂದರು.
ಜೂನ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು ಜುಲೈನಿಂದಲೇ ಯೋಜನೆ ಲಾಭ ಸಿಗಲಿದೆ. ಜುಲೈ ಒಳಗೆ ಬಳಸಿರೋ ಕರೆಂಟ್ ಬಿಲ್ ಪಾವತಿಸಬೇಕು. ಮೊಬೈಲ್ ಆ್ಯಪ್ ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ