ಕುಣಿಗಲ್
ತಾಲ್ಲೂಕಿನ ಜನರ ಜೀವನಾಡಿ ಇತಿಹಾಸ ಸುಪ್ರಸಿದ್ದ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ಜಾಕ್‍ವೆಲ್ ಮೂಲಕ ನೀರು ಹರಿಸಿಕೊಳ್ಳಲು ಏಕಾಏಕಿ ಮಂಡ್ಯ ಜಿಲ್ಲೆಯ ಪೊಲೀಸ್ ಶಕ್ತಿಯನ್ನು ಬಳಸಿಕೊಂಡು 144 ಸೆಕ್ಷನ್ ವಿಧಿಸಿ, ಕಾಮಗಾರಿ ಪುನರ್ ಆರಂಭಿಸಲು ಬಂದವರನ್ನು ಡಾ.ಹೆಚ್.ಡಿ. ರಂಗನಾಥ್ ನೇತೃತ್ವದಲ್ಲಿ ನೂರಾರು ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಕಾರಣ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿ ಹಿಂದೆ ಸರಿದ ಘಟನೆ ನಡೆಯಿತು.
ಈ ಹಿಂದೆ ತಾಲ್ಲೂಕಿನ ರೈತರ ಸಂಘವು ಉಗ್ರವಾಗಿ ಪ್ರತಿಭಟಿಸುವ ಮೂಲಕ ಈ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಮಾರ್ಕೋನಹಳ್ಳಿ ಜಲಾಶಯಕ್ಕೆ ಅಳವಡಿಸಿದ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ, ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರ್ ಪ್ರಾರಂಭಿಸಲು ಮಂಡ್ಯ ಜಿಲ್ಲೆಯ ಪೊಲೀಸರು, ನಾಗಮಂಗಲ ಪೊಲೀಸರ ದಂಡು ದಾಳಿಯನ್ನು ಪಡೆದ ಅಲ್ಲಿನ ಶಾಸಕರು ಮತ್ತು ಗುತ್ತಿಗೆದಾರರು ಒಳಸಂಚು ರೂಪಿಸಿ ಏಕಾಏಕಿ 144 ಸೆಕ್ಷನ್ ವಿಧಿಸಿ ನೂರಾರು ಪೊಲೀಸ್ ಸಿಬ್ಬಂದಿಗಳೊಂದಿಗೆ ತಾಲ್ಲೂಕಿನ ಗಡಿ ಭಾಗದ ನೆಪ ಹೊಡ್ಡಿಕೊಂಡು ನಾಲ್ಕೈದು ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ಪ್ರಾರಂಭಿಸಲು ಬಂದಿದ್ದರು. ಈ ಸುದ್ದಿಯನ್ನು ತಿಳಿದ ಶಾಸಕ ರಂಗನಾಥ್ ಕೂಡಲೇ ಸ್ಥಳಕ್ಕೆ ಧಾವಿಸಿ ಕಾಮಗಾರಿಯ ಸಂಪೂರ್ಣ ಮಾಹಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಿದರು.
ಮಂಡ್ಯ ಜಿಲ್ಲೆಯ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ ಪ್ರಯಾಣಿಕರು :
ಮಾರ್ಕೋನಹಳ್ಳಿ ಜಲಾಶಯದ ಕೋಡಿ ಭಾಗದ ಸೇತುವೆಗೆ ಅಡ್ಡಲಾಗಿ ಪೊಲೀಸರು ತಮ್ಮ ನಿರ್ಬಂಧ ವಿಧಿಸಿ ಆ ಭಾಗದ ಮೂಲಕ ಬಿಸಿಲೆಳೆ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ನಾಗಮಂಗಲಕ್ಕೆ ಹೋಗದಂತೆ ಗಂಟೆಗಟ್ಟಲೆ ತಡೆದಿದ್ದರಿಂದ ರೊಚ್ಚಿಗೆದ್ದ ಜನರು ಮಂಡ್ಯ-ನಾಗಮಂಗಲ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ತಹಸೀಲ್ದಾರ್ ಹಾಗೂ ಪತ್ರಕರ್ತರನ್ನು ತಡೆದ ಪೊಲೀಸರು:
ಏಕಾಏಕಿ ಪ್ರಾರಂಭಿಸಿದ ಕಾಮಗಾರಿಯ ಸ್ಥಳಕ್ಕೆ ಸುದ್ದಿ ತಿಳಿದು ಆಗಮಿಸಿದ ತಹಸೀಲ್ದಾರ್ ವಿಶ್ವನಾಥ್ ಅವರನ್ನು ಗುರುತಿಸದ ಪೊಲೀಸರು ತಡೆದು ನಿಲ್ಲಿಸಿ ನಂತರ ಬಿಟ್ಟರು. ಅದೇ ರೀತಿ ಪತ್ರಕರ್ತರು ಎಂದು ಕೇಳಿಕೊಂಡರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಶಾಸಕರಿದ್ದಾರೆ ನಮ್ಮನ್ನು ಬಿಡಿ ಪೋಟೋ ತೆಗೆದುಕೊಂಡು ಬರುತ್ತೇವೆ ಎಂದರೂ ಆ ಭಾಗದ ಪೊಲಿಸರು ಬಿಡದೆ ಹೋದಾಗ ಪೊಲೀಸರ ಮತ್ತು ಪತ್ರಕರ್ತರ ನಡುವೆ ವಾಗ್ವಾದ ನಡೆದ ನಂತರ ಬಿಟ್ಟರು.
ಜೆಸಿಬಿ ಯಂತ್ರ ತಡೆಯಲು ಅಡ್ಡ ಕೂತ ಶಾಸಕ :
ಶಾಸಕ ಡಾ.ಹೆಚ್.ಡಿ.ರಂಗನಾಥ್ ಕಾಮಗಾರಿ ನಡೆಯುತ್ತಿದ್ದ ಜೆಸಿಬಿ ಯಂತ್ರಗಳನ್ನು ನಿಲ್ಲಿಸುವಂತೆ ಹೇಳಿದರೂ ನಿಲ್ಲಿಸದಿದ್ದಾಗ ಆವೇಶಗೊಂಡ ಅವರು ಅದರ ಮುಂದೆ ಒಬ್ಬರೇ ಕೂತು ನೀನು ಮಾಡುವುದಾದರೆ ನನ್ನ ಹೆಣದ ಮೇಲೆ ಈ ಕಾಮಗಾರಿ ಕೆಲಸವನ್ನು ಮಾಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನರಿತ ಸಿಬ್ಬಂದಿಗಳು ಕೂಡಲೇ ಕೆಲಸ ನಿಲ್ಲಿಸಿದ ಪ್ರಸಂಗ ನಡೆಯಿತು.
ಜೀವ ಹೋದರೂ ಸರಿಯೇ ಬಿಡುವುದಿಲ್ಲ :
ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಮಾತನಾಡಿ, ಶಾಸಕ ಡಾ.ರಂಗನಾಥ್ ಹಿಂದಿನ ಸರ್ಕಾರಗಳು ಈ ಕಾಮಗಾರಿಗೆ ಆದೇಶ ನೀಡಿವೆ. ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧವಾದ ಮಾರ್ಕೋನಹಳ್ಳಿ ಜಲಾಶಯಕ್ಕೆ ತಾಲ್ಲೂಕಿನ ಜನರ ಕೊಡುಗೆ ಅಪಾರ. ರೈತರು ತಮ್ಮ ಜಮೀನುಗಳನ್ನು ಬಿಟ್ಟಿದ್ದಾರೆ. ಸಾವಿರಾರು ಹೆಕ್ಟೇರ್‍ಗಳಿಗೆ ನೀರುಣಿಸಬೇಕಿದೆ. ಹೇಮಾವತಿಯ ನೀರು ಈ ಜಲಾಶಯಕ್ಕೆ ಇನ್ನೂ ಕಡತಗಳಲ್ಲಿ ಇಂತಿಷ್ಟು ಬಿಡುವಂತೆ ನಿಗಧಿಯಾಗಿಲ್ಲ. ನಮ್ಮ ಭಾಗದ ರೈತರ ನೀರಿನ ಹಾಹಾಕಾರ ನೀಗಿಸಿದ ನಂತರವೇ ಬೇರೆಯವರಿಗೆ ಬಿಡಬಹುದು. ಆದರೆ ಏಕಾಏಕಿ ನಾಗಮಂಗಲದ ಶಾಸಕರು ಮತ್ತು ಅಲ್ಲಿನ ಗುತ್ತಿಗೆದಾರರು ಇಂತಹ ಕೆಲಸಕ್ಕೆ ಮುಂದಾಗಿರುವ ಕ್ರಮ ಸರಿಯಿಲ್ಲ. ನನ್ನ ಜೀವ ಹೋದರೂ ಸರಿಯೇ ಈ ಹಿಂದೆ ಯಾರೋ ಮಾಡಿದ ತಪ್ಪನ್ನು ನಾನೂ ಮಾಡಿದರೆ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ :
ಇವರು ಈಗ ಮಾಡುತ್ತಿರುವ ಕಾಮಗಾರಿ ಕೆಲಸ ಅವೈಜ್ಞಾನಿಕವಾಗಿದೆ. ಈ ಜಲಾಶಯಕ್ಕೆ ಯಾವುದೇ ಕಬ್ಬಿಣವನ್ನು ಬಳಸದೆ ಬರಿ ಗಾರೆಯಿಂದ ನಿರ್ಮಿಸಿದ್ದು ಇಲ್ಲಿ ಆಟೋಮ್ಯಾಟಿಕ್ ಸೈಫನ್‍ಗಳಿವೆ. ಅವು ನೀರು ತುಂಬಿದಾಗ ಬಹುದೂರದ ಹಿನ್ನೀರನ್ನೇ ಬಿರುಸಾಗಿ ಸೆಳೆಯುತ್ತವೆ. ಇದಾವುದನ್ನು ಗಮನಿಸಿಲ್ಲ. ಜಲಾಶಯದ ರಕ್ಷಣೆಗೆ ಇಂತಿಷ್ಟು ನೀರು ಇರಲೇಬೇಕು ಅದನ್ನು ಪರಿಗಣಿಸಿಲ್ಲ. ಎನ್.ಜಿ.ಟಿ. ರೂಲ್ಸ್ ಪರಿಪಾಲನೆಯಾಗಿಲ್ಲ. ಇಂಜಿನಿಯರ್ಸ್ ಹೇಳಿರುವಂತೆಯೇ ಜಾಕ್‍ವೆಲ್‍ನ್ನು ಸುಮಾರು 1 ಕಿ.ಮೀ.ಗೂ ಹಿಂದೆ ಹಿನ್ನೀರಿನಲ್ಲಿ ಮಾಡಬೇಕು.
ಆದರೆ ಈಗ 14 ಮಿನಿ ಸೈಫನ್ ಇರುವ ಕಡೆ ಡಿ.ವಾಟರ್ ಮಾಡಲು ಹೊರಟಿದ್ದಾರೆ. ಆದ್ದರಿಂದ ಈ ಕಾಮಗಾರಿ ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ ಕೂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಕೂಡಲೇ ಈ ಜಲಾಶಯಕ್ಕೆ ಲೋಪದೋಷ ಬರದಂತೆ ಹಾಗೂ ಹೇಮಾವತಿ ನೀರನ್ನು ಈ ಜಲಾಶಯಕ್ಕೆ ಹರಿಸಲು ಸೂಕ್ತ ಕ್ರಮಕೈಗೊಂಡ ನಂತರ ಹಾಗೂ ಈ ಭಾಗದ ಎಲ್ಲ ರೈತರ ನೀರಿನ ಕೊರತೆಯನ್ನು ನೀಗಿಸಿ ನಂತರ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ರೂಪಿಸಿ ಜಲಾಶಯಕ್ಕೆ ಎಂದಿಗೂ ತೊಂದರೆ ಆಗದ ರೀತಿಯಲ್ಲಿ ನೀರನ್ನು ಹರಿಸಿಕೊಳ್ಳಲಿ. ಇದಕ್ಕೆ ನಮ್ಮ ಅಡ್ಡಿ ಇಲ್ಲ ಎಂದು ಪಟ್ಟುಹಿಡಿದರು.
ಶಾಸಕರ ಮಾತಿಗೆ ಒಪ್ಪಿದ ಮಂಡ್ಯ ಭಾಗದಿಂದ ಬಂದಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ನಾಗಮಂಗಲ ತಾಲ್ಲೂಕು ತಹಸೀಲ್ದಾರ್ ರೂಪ ಅವರು ತಾವು ವಿಧಿಸಿದ್ದ 144 ಸೆಕ್ಷನ್ ಹಿಂದೆ ಪಡೆದು ಕಾಮಗಾರಿಯನ್ನು ನಿಲ್ಲಿಸಿದರು.ಸೋಮವಾರ ಮಾರ್ಕೋನ ಹಳ್ಳಿ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಕರೆದು ಅಲ್ಲಿ ಕೂಲಂಕಷವಾಗಿ ಚರ್ಚಿಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ