ಅ.2ರಿಂದ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಪ್ರತಿ ಭಟನೆ : ಕಾಂಗ್ರೆಸ್

ಬೆಂಗಳೂರು

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

    ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಟೋಬರ್ 10 ರಂದು ರೈತ ಸಮಾವೇಶ ನಡೆಸಲಾಗುವುದು. ಅಕ್ಟೋಬರ್ 30 ರೊಳಗೆ ಬಿಜೆಪಿ ನೀತಿ ವಿರುದ್ಧ ದೇಶಾದ್ಯಂತ ಜನರಿಂದ 2 ಕೋಟಿ ಸಹಿ ಸಂಗ್ರಹಿಸಿ ಅದನ್ನು ಎಐಸಿಸಿ ನಾಯಕಿ ಸೋನಿಯಾಗಾಂಧಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದರು.

     ಮೋದಿ ಹಾಗೂ ಯಡಿಯೂರಪ್ಪ ರೈತರ ಪರ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳುತ್ತಿದ್ದರಾದರೂ ದೇಶದ ಎಲ್ಲ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕೇವಲ ಸಿರಿವಂತರಷ್ಟೇ ಭೂಮಿ ಖರೀದಿಸುತ್ತಾರೆ. ಆಗ ರೈತರು ಎಲ್ಲಿಗೆ ಹೋಗಬೇಕು. ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆಂದು ಮೋದಿ ಹಸಿಸುಳ್ಳು ಹೇಳುತ್ತಿದ್ದಾರೆ ಎಂದರು.

    ರೈತರ ಬೆಂಬಲಕ್ಕೆ ಯಾರೂ ನಿಲ್ಲುವುದಿಲ್ಲವೋ ಅವರು ಯಾರ ಪರವೂ ನಿಲ್ಲುವುದಿಲ್ಲ ಎಂಬ ಮಾತು ಮೋದಿ ಹಾಗೂ ಯಡಿಯೂರಪ್ಪಗೆ ಸೂಕ್ತವಾಗಿ ಅನ್ವಯವಾಗುತ್ತದೆ. ದೇಶದಲ್ಲಿ ಶೇ. 80 ರಷ್ಟು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣರೈತರಿದ್ದಾರೆ. ಕೊಡಗಿನಲ್ಲಿ ಕಾಫಿ ಬೆಳೆಯುವ ರೈತ ದೆಹಲಿಗೆ ಹೋಗಿ ಕಾಫಿ ಮಾರಲು ಆಗುವುದಿಲ್ಲ, ಹರಿಯಾಣದ ರೈತ ಬೆಂಗಳೂರಿಗೆ ಬಂದು ಅಕ್ಕಿ ಮಾರಲು ಸಾಧ್ಯವಿಲ್ಲ. ಅನ್ನದಾತನ ವಿರುದ್ಧ ಅನ್ಯಾಯ ಸಹಿಸುವುದಿಲ್ಲ.

    ಕೇಂದ್ರ ಸರ್ಕಾರ ಬಡವರು, ದಲಿತರು ಹಾಗೂ ಹಿಂದುಳಿದ ಸಮುದಾಯದ ಕೂಲಿ ಕಾರ್ಮಿಕರನ್ನು ಮುಗಿಸಲು ಹೊರಟಿದೆ. ಸಣ್ಣ ಅಂಗಡಿಗಳು ಮುಂದಿನ ದಿನಗಳಲ್ಲಿ ಮುಚ್ಚಲಿವೆ ಎಂದು ಅವರು ಭವಿಷ್ಯ ನುಡಿದರು.ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಮಾಣ ವಚನ ತೆಗೆದುಕೊಳ್ಳುವಾಗ ರೈತನ ಮಗ ಎಂದು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ಡೋಂಗಿ ರೈತ ನಾಯಕ. ಯಡಿಯೂರಪ್ಪ ನಿಜವಾಗಿಯೂ ರೈತನ ಮಗ ಆಗಿದ್ದರೆ, ಭೂಸುಧಾರಣೆ, ಎಪಿಎಂಸಿ , ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರಲಿಲ್ಲ ಎಂದರು.

     ಹಸಿರು ಶಾಲು ಹಾಕಿದ ತಕ್ಷಣ ರೈತರಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಡೋಂಗಿ ಅಲ್ಲದೇ ಬೇರೆ ಇನ್ನೇನು. ಕಾಂಗ್ರೆಸ್ ರೈತರ ಪರವಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತ ಬಂದಿದೆ. ಮುಂದೆಯೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.
ಕರ್ನಾಟಕ ಏಕೀಕರಣಕ್ಕೂ ಮೊದಲು ಟೆನೆನ್ಸಿ ಕಾಯ್ದೆ ಇತ್ತು. 1961 ರಲ್ಲಿ ಭೂ ಸುಧಾರಣೆ ಕಾಯ್ದೆ ತಂದರು. ಮುಂದೆ ದೇವರಾಜ್ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಉಳುವವನೆ ಭೂ ಒಡೆಯ ಕಾಯ್ದೆ ಜಾರಿಗೆ ತಂದರು. 1974 ರಿಂದ ಜಾರಿಗೆ ಬಂದಿದೆ. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹ ಎಂದು ಹೇಳಿದ್ದರು. ಒಬ್ಬರು ಒಂದೇ ವೃತ್ತಿ ಮಾಡಬಹುದು. 79 ಎ ಯಲ್ಲಿ 25 ಲಕ್ಷ ಕ್ಕೂ ಹೆಚ್ಚು ಆದಾಯ ಹೊಂದಿದ್ದರೆ ಅವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಇರಲಿಲ್ಲ. ಈ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ರೈತರು ಹಣದಾಸೆಗೆ ಜಮೀನು ಮಾರಿ ನಗರ ಪ್ರದೇಶಗಳಿಗೆ ಕೂಲಿಗೆ ಬರುತ್ತಾರೆ. ಇದರಿಂದ ನಗರ ಪ್ರದೇಶದಲ್ಲಿ ಕೊಳಚೆ ಪ್ರದೇಶಗಳು ಹೆಚ್ಚಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

     ಬೆಂಗಳೂರು ಸುತ್ತಮುತ್ತ ಬಾಕಿಯಿದ್ದ ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರದ್ದು ಪಡಿಸಿದ್ದಾರೆ. ಅದನ್ನೂ ದುಡ್ಡಿಗಾಗಿ ಮಾಡಿದ್ದಾರೆ. ಯಡಿಯೂರಪ್ಪ ಲೂಟಿ ಮಾಡುವುದರಲ್ಲಿ ತೊಡಗಿದ್ದಾರೆ. ಅಗತ್ಯ ಇದ್ದರೆ ಮಾತ್ರ ಸುಗ್ರೀವಾಜ್ಞೆ ತರುತ್ತಾರೆ. ಕೊರೊನಾ ಸಂದರ್ಭದಲ್ಲಿ ಲೂಟಿ ಮಾಡಲು ಈ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಪಿಪಿಇ ಕಿಟ್ ಖರಿದಿಯಲ್ಲೂ ಹೊಡೆದಿದ್ದಾರೆ. ಬಿಡಿಎ ಹಗರಣದಲ್ಲಿ ಯಡಿಯೂರಪ್ಪ ಮಗ, ಅಳಿಯ, ಮೊಮ್ಮಗ ಹಣ ಪಡೆದಿದ್ದಾರೆ. ಮೊಮ್ಮಗ ಶಶಿಧರ ಮರಡಿ ಖಾತೆಗೆ ಆರ್ ಟಿ.ಜಿಎಸ್ ಮೂಲಕ 7.4 ಕೋಟಿ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದರು.

     ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಂತೆ ಅಮಿತ್ ಶಾ ಒತ್ತಡ ಹೇರಿದ್ದಾರೆ. ಇದು ರಾಜ್ಯದ ವಿಷಯ. ಕಾಯಿದೆ ತಿದ್ದುಪಡಿ ಮೂಲಕ ರಾಜ್ಯದ ರೈತರನ್ನು ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಹೋರಾಟಕ್ಕಾಗಿ ಹುಟ್ಟಿರುವ ಪಕ್ಷ. ದುರ್ಬಲರ ಪರವಾಗಿರುವ ಪಕ್ಷ. ಬಿಜೆಪಿಯವರಂತಹ ನಯ ವಂಚಕರು ಎಲ್ಲಿಯೂ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಈ ಮಸೂದೆ ರೈತರಿಗೆ ಮರಣ ಶಾಸನ ಇದ್ದಂತೆ. ಕಾಂಗ್ರೆಸ್ ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿಯನ್ನು ತೀವ್ರವಾಗಿ ವಿರೋಧಿಸುತ್ತದೆ. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸಹಿ ಮಾಡದಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆಯ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜೂಭಾಯಿವಾಲಾಗೆ ಮನವಿ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap