ಆಂಧ್ರ-ತೆಲಂಗಾಣದಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, 25 ಮಂದಿ ಸಾವು

ಅಮರಾವತಿ:

   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸತತ 2ನೇ ದಿನವೂ ವರುಣನ ಆರ್ಭಟ ಮುಂದುವರೆದಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದೆ.

   ತೆಲಂಗಾಣದಲ್ಲಿ ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸುರಿದಿದ್ದು, ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಂಡಿದ್ದು, 99 ರೈಲುಗಳನ್ನು ರದ್ದುಗೊಂಡಿವೆ. ದಕ್ಷಿಣ ಮಧ್ಯ ರೈಲ್ವೆ ಜಾಲದ ಅನೇಕ ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಹಳಿಗಳ ಮೇಲೆ ನೀರು ನಿಂತಿದ್ದರಿಂದ 54 ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಎಸ್‌ಸಿಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಎರಡೂ ರಾಜ್ಯಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ತಡೆ ಪಡೆಗಳು ಪ್ರವಾಹ ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ, ಶಿಬಿರಗಳಿಗೆ ಸ್ಥಳಾಂತರಿಸಿದ್ದಾರೆ,ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಮಳೆ ಮತ್ತು ಪ್ರವಾಹವನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

  ಈ ನಡುವೆ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 26 ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಎರಡು ರಾಜ್ಯಗಳಲ್ಲಿ ಈಗಾಗಲೇ 12 ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 14 ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  14 ತಂಡಗಳ ಪೈಕಿ 8 ತಂಡಗಳನ್ನು ದೇಶದ ವಿವಿಧ ಸ್ಥಳಗಳಿಂದ ವಿಮಾನದಲ್ಲಿ ಕರೆತರಲಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಈ ವರೆಗೆ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ತುರ್ತು ಸಭೆ ನಡೆಸಿದ್ದು, ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಳುಗಡೆಗೊಂಡಿರುವ ಪ್ರದೇಶಗಳಲ್ಲಿ ಪರಿಹಾರ ಕ್ರಮಗಳ ಕೈಗೊಳ್ಳುವಂತೆ ಸೂಚಿಸಿದ್ದಾರೆ.ತೆಲಂಗಾಣದಲ್ಲಿ ಈ ವರೆಗೂ 17,000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

   ಮಹಬೂಬಾಬಾದ್ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಭಾನುವಾರ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಕೊಚ್ಚಿಹೋಗಿದ್ದಾರೆ.ಕೆಸಮುದ್ರ ಮಂಡಲದ ತಲ್ಲಪುಸಪಲ್ಲಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ರೈಲು ಹಳಿ ಕೊಚ್ಚಿ ಹೋಗಿದ್ದು, ಇದರಿಂದ ಕೇಸಮುದ್ರ ಮತ್ತು ಮಹಬೂಬಾಬಾದ್ ರೈಲು ನಿಲ್ದಾಣಗಳಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

   ಅಂತೆಯೇ, ವಿಜಯವಾಡ-ವಾರಂಗಲ್ ಮಾರ್ಗದಲ್ಲಿ ರೈಲು ಸಂಚಾರದ ಮೇಲೂ ಪರಿಣಾಮ ಬೀರಿದೆ. ವಿಜಯವಾಡ-ಖಮ್ಮಂ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಹಗಿತಗೊಳಿಸಲಾಗಿದೆ. ಮಳೆಯ ಪರಿಣಾಮ ತೆಲಂಗಾಣ ಸರ್ಕಾರವು ಸೋಮವಾರ ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

  ವಾರಂಗಲ್ ಜಿಲ್ಲೆಯಲ್ಲಿ ಶನಿವಾರದಿಂದಲೂ ಭಾರೀ ಮಳೆಯಾಗುತ್ತಿದ್ದು, ಕೆರೆ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಹಬೂಬಾಬಾದ್ ಜಿಲ್ಲೆಯ ಕುರವಿ ಮಂಡಲದ ನಲ್ಲೇಲ ಗ್ರಾಮ ಜಲಾವೃತಗೊಂಡಿದೆ. ಎರಡು ದಶಕಗಳಲ್ಲಿ ಗ್ರಾಮದಲ್ಲಿ ಇಂತಹ ಭೀಕರ ಪ್ರವಾಹ ಉಂಟಾಗಿರುವುದು ಇದೇ ಮೊದಲು ಎನ್ನಲಾಗಿದೆ. ಈ ನಡುವೆ ತೆಲಂಗಾಣದಲ್ಲಿ ಮುಂದಿನ 3 ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರದ ನಿರ್ದೇಶಕ ಡಾ ಕೆ ನಾಗರತ್ನಂ ಹೇಳಿದ್ದಾರೆ.

  ತೆಲಂಗಾಣದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ವ ಮತ್ತು ಈಶಾನ್ಯ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಹೈದರಾಬಾದ್‌ನಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆ ಮತ್ತು ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

   ಏತನ್ಮಧ್ಯೆ ಪ್ರವಾಹ ಪೀಡಿತ ಪ್ರದೇಶಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ

Recent Articles

spot_img

Related Stories

Share via
Copy link
Powered by Social Snap