ಬೆಂಗಳೂರು:
ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತರನ್ನು ಮಹಾರಾಷ್ಟ್ರ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ.
ಚಿನ್ನಾಭರಣ ಅಂಗಡಿಯವರು ಚಿನ್ನವನ್ನು ಕರಗಿಸಲು ಆಮ್ಲಜನಕ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತಿದ್ದರು. ವಿಷ್ಣು ಅವರ ಪತ್ನಿ ಶುಕ್ರವಾರ ಮಧ್ಯಾಹ್ನ ಊಟ ತಂದಾಗ ಆಮ್ಲಜನಕ ಸಿಲಿಂಡರ್‌ನ ವಾಲ್ವ್ ತೆರೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವಾಲ್ವ್ ತೆರೆದಿದ್ದರಿಂದ ಒತ್ತಡ ಹೆಚ್ಚಾದ ಕಾರಣ ಆಮ್ಲಜನಕದ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವಿಷ್ಣು ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅಂಗಡಿಯಲ್ಲಿದ್ದ ವಿಷ್ಣು ಪತ್ನಿ ವೈಜಯಂತಿ ಕೂಡ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷ್ಣು ಮತ್ತು ವೈಜಯಂತಿ ಕಳೆದ ಒಂದು ವರ್ಷದಿಂದ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಸೋನಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಂಗಡಿ ಮಾಲೀಕರಾದ ರಮೇಶ ಕೊಟಾರಿ, ಕಟ್ಟಡ ಮಾಲೀಕ ಮಹೇಶ ಕೊಟಾರಿ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಗಡಿಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಬಳಸಲು ಇಲಾಖೆಯಿಂದ ಅಂಗಡಿ ಪರವಾನಗಿ ಪಡೆದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








