ಇಂದು ನಗರಸಭೆ ಚುನಾವಣೆ ಫಲಿತಾಂಶ ಹಾಲಿ,ಮಾಜಿಗಳ ರಾಜಕೀಯ ಭವಿಷ್ಯ ನಿರ್ಧಾರ

ಚಿತ್ರದುರ್ಗ;
                 ಚಿತ್ರದುರ್ಗ ನಗರಸಭೆಯೂ ಸೇರಿದಂತೆ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಮತ ಏಣಿಕೆಯು ಅಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮದ್ಯಾಹ್ನದ ವೇಳೆ ಪೂರ್ಣ ಪ್ರಮಾಣದ ಫಲಿತಾಂಶ ಪ್ರಕಟಗೊಳ್ಳಲಿದೆ.
                  ಮತ ಏಣಿಕೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಏಣಿಕೆ ಆರಂಭವಾಗಲಿದೆ. ಚಿತ್ರದುರ್ಗದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಚಳ್ಳಕೆರೆ ಮತ್ತು ಹೊಸದುರ್ಗದಲ್ಲಿ ತಾಲ್ಲೂಕು ಕಚೇರಿಯನ್ನು ಮಸ್ಟರಿಂಗ್, ಡಿ.ಮಸ್ಟರಿಂಗ್ ಕೇಂದ್ರಗಳನ್ನಾಗಿ ಮಾಡಲಾಗಿದೆ.
                   ಚಳ್ಳಕೆರೆ 5, ಚಿತ್ರದುರ್ಗ 13 ಹಾಗೂ ಹೊಸದುರ್ಗದಲ್ಲಿ 3 ಎಣಿಕೆ ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಒಟ್ಟು 24 ಎಣಿಕೆ ಮೇಲ್ವಿಚಾರಕರು, 24 ಎಣಿಕೆ ಸಹಾಯಕರು ಹಾಗೂ 24 ಗ್ರೂಪ್ ಡಿ. ಸಿಬ್ಬಂದಿಯ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
                     ಚಿತ್ರದುರ್ಗ ನಗರಸಭೆಯ 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ 79049 ಮತದಾರರು ಮತ ಚಲಾಯಿಸಿದ್ದು ಶೇ 63.22ರಷ್ಟು ಮತದಾನವಾಗಿದೆ. ಮತ ಚಲಾಯಿಸಿದವರಲ್ಲಿ 39470 ಪುರುಷ ಹಾಗೂ 39576 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.61955 ಪುರುಷ, 63033 ಮಹಿಳಾ ಹಾಗೂ ಇತರೆ 34 ಮತದಾರರು ಸೇರಿಒಟ್ಟು125022 ಮತದಾರರಿದ್ದರು.
ನಗರಸಭೆಯ 35 ವಾರ್ಡ್‍ಗಳಲ್ಲಿ ಒಟ್ಟು 161 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್, ಜೆಡಿಎಸ್‍ನಿಂದ ಹಲವು ಮಂದಿ ಹೊಸಬರು ಮತ್ತು ಹಳಬರೂ ಚುನಾವಣೆಯ ಅಖಾಡಕ್ಕಿಳಿದಿದ್ದು, ಫಲಿತಾಂಶ ಕುತೂಹಲ ಮೂಡಿಸುತ್ತಿದೆ.
ಮಾಜಿ ಅಧ್ಯಕ್ಷರಾದ ಮಹಮದ್ ಅಹಮದ್ ಪಾಷ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದು, ಈ ಬಾರಿ ಮತ್ತೆ 23ನೇ ವಾರ್ಡಿನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಅದ್ಯಕ್ಷರಾದ ಪೊಲೀಸ್ ಮಲ್ಲಿಕಾರ್ಜುನ್, ಸಿ.ಟಿ.ಕೃಷ್ಣಮೂರ್ತಿ, ಗೊಪ್ಪೆ ಮಂಜುನಾಥ್, ಹೆಚ್.ಸಿ.ನಿರಂಜನಮೂರ್ತಿ, ತಿಮ್ಮಣ್ಣ ಅವರು ಈ ಬಾರಿಯೂ ಸ್ಪರ್ದೆಗಿಳಿದಿದ್ದು, ಅವರ ಮುಂದಿನ ರಾಜಕೀಯ ಭವಿಷ್ಯ ಇಂದು ನಿರ್ದಾರವಾಗಲಿದೆ.
                       22ನೇ ವಾರ್ಡಿನಲ್ಲಿ ಸತತ ಐದು ಬಾರಿ ಸ್ಪರ್ದಿಸಿರುವ ರವಿಶಂಕರ್‍ಬಾಬು ಈಗ ನಾಲ್ಕನೆಯ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಇಲ್ಲಿ ರವಿಶಂಕರ್ ಬಾಬು ಗೆದ್ದರೆ ನಗರಸಭೆಯ ಇತಿಹಾಸದಲ್ಲಿ ಒಂದೇ ವಾರ್ಡಿನಲ್ಲಿ ಒಬ್ಬ ವ್ಯಕ್ತಿ ಸತತವಾಗಿ ಐದು ಬಾರಿ ಸ್ಪರ್ದಿಸಿ ನಾಲ್ಕು ಬಾರಿ ಗೆದ್ದ ಇತಿಹಾಸ ಬರೆಯಲಿದ್ದಾರೆ.
                      ಮಾಜಿ ಸದಸ್ಯರೂ ಆಗಿರುವ ಅನುಪಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಬಾಸ್ಕರ್ ಅವರ ಸ್ಪರ್ದೆಯಿಂದ ಚುನಾವಣೆಯ ರಂಗೇರಿದ್ದ 35ನೇ ವಾರ್ಡಿನ ಫಲಿತಾಂಶದ ಬಗ್ಗೆ ಜನರಲ್ಲಿ ಬಾರೀ ಕುತೂಹಲ ಹುಟ್ಟು ಹಾಕಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಜಿದ್ದಾಜಿದ್ದಿ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತಾದರೂ ಇಲ್ಲಿ ಬಾಸ್ಕರ್ ಮತ್ತೆ ಗೆಲುವಿನ ನಗೆ ಬೀರಲಿದ್ದಾರೆ
34ನೇ ವಾರ್ಡಿನಲ್ಲಿ ಮತ್ತೊಬ್ಬ ಮಾಜಿ ಸದಸ್ಯ ಹೆಚ್.ಶ್ರೀನಿವಾಸ್, 4ನೇ ವಾರ್ಡಿನಲ್ಲಿ ಹಾಲಿ ಸದಸ್ಯ ಚಂದ್ರಶೇಖರ್,8ನೇ ವಾರ್ಡಿನಲ್ಲಿ ಮತ್ತೊಬ್ಬ ಮಾಜಿ ಸದಸ್ಯ ಶ್ರೀರಾಮ್, 9ನೇ ವಾರ್ಡಿನಲ್ಲಿ ರತ್ನಮ್ಮ ಅವರೂ ಸ್ಪರ್ದಿಸಿದ್ದು, ಇವರುಗಳ ರಾಜಕೀಯ ಭವಿಷ್ಯವೂ ಇಂದು ನಿರ್ಣಯವಾಗಲಿದೆ.
                     ಈ ಬಾರಿಯ ಚುನಾವಣೆಯಲ್ಲಿ ಮೂರು ಪಕ್ಷಗಳಲ್ಲಿಯೂ ಪ್ರಭಾವಿಗಳಿಗೆ ಟಿಕೆಟ್ ಕೊಡಲಾಗಿದೆ. ಉದ್ಯಮಿಗಳು, ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರುಗಳ ಜೊತೆಗೆ ಹೊಸಬರಿಗೂ ಅವಕಾಶ ಕೊಡಲಾಗಿದೆ. ರಿಯಲ್ ಎಸ್ಟೇಟ್‍ವ್ಯವಹಾರ ಮಾಡುವವರು, ಬಡ್ಡಿ ವ್ಯವಹಾರ ನಡೆಸುವವರೂ ಸ್ಪರ್ದಿಸಿದ್ದರಿಂದ ಈ ಚುನಾವಣೆ ರಂಗೇರಿತ್ತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link