ಇಬ್ಬರು ದುರೀಣರ ಮನಸ್ತಾಪದಿಂದ ಜಿಲ್ಲಾ ಕಾಂಗ್ರೆಸ್ ಗೊಂದಲದಲ್ಲದೆ

ಕೊರಟಗೆರೆ

      ಡಾ.ಜಿ.ಪರಮೇಶ್ವರ್ ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಯೋಚಿಸಿ ಮಾತನಾಡಬೇಕಿದೆ. ಜಿಲ್ಲೆಯಲ್ಲಿ ಪರಮೇಶ್ವರ್ ಮತ್ತು ರಾಜಣ್ಣರವರ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ವೈಮನಸ್ಸು ಉಂಟಾಗಿದ್ದು, ಕಾಂಗ್ರೆಸ್ ಪಕ್ಷ ಗೊಂದಲಕ್ಕೆ ಸಿಲುಕಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್ ನಾರಾಯಣ್ ತಿಳಿಸಿದರು.

       ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಇಬ್ಬರೂ ಪಕ್ಷದ ಪ್ರಭಾವಿ ನಾಯಕರುಗಳಾಗಿದ್ದಾರೆ. ಕೆ.ಎನ್.ರಾಜಣ್ಣನವರೂ ಕೂಡ ಡಾ.ಜಿ.ಪರಮೇಶ್ವರ್‍ರವರಿಗೆ ಸರಕಾರ ನೀಡಿರುವ ಶಿಷ್ಟಾಚಾರದ ಭದ್ರತೆಯನ್ನು ಜ್ಹೀರೋ ಟ್ರಾಫಿಕ್ ಮಂತ್ರಿ ಎಂದು ಅವಹೇಳನ ಮಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ. ಇದರಿಂದ ಪಕ್ಷದಲ್ಲಿ ಅನಗತ್ಯ ಗೊಂದಲ ಮೂಡಿದ್ದು, ಕೂಡಲೇ ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕಿದೆ ಎಂದು ಹೇಳಿದರು.

      ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ದೇಶದಲ್ಲೇ ಸಜ್ಜನ ರಾಜಕಾರಣಿಗಳಲ್ಲಿ ಡಾ.ಜಿ.ಪರಮೇಶ್ವರ್ ಒಬ್ಬರಾಗಿದ್ದಾರೆ. ಅವರು ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಯಾರೊಬ್ಬರನ್ನೂ ಏಕವಚನ ಮತ್ತು ಕೀಳು ಭಾಷೆಯಲ್ಲಿ ನಿಂದಿಸಿ ಮಾತನಾಡಿಲ್ಲ. ಅಂತಹ ವ್ಯಕ್ತಿ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೀಳು ಭಾಷೆಯಲ್ಲಿ ಮಾತನಾಡಿರುವುದು ಸರಿ ಅಲ್ಲ. ಮಾಜಿ ಶಾಸಕರು ಬಾಯಿ ತಪ್ಪಿನಿಂದ ಮಾತನಾಡಿದ್ದರೆ, ಕ್ಷಮೆ ಕೇಳಿದ್ದರೆ, ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

      ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬಲಿಷ್ಠ ಜೋಡೆತ್ತುಗಳಾದ ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಒಂದಾಗಿ ನಡೆಯದಿದ್ದರೆ ಪಕ್ಷವು ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.ಮಾಜಿ ಕಾಂಗ್ರೆಸ್ ಅಧ್ಯಕ್ಷ ಮೈಲಾರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್ ರಾಜಣ್ಣನವರ ಪರ ಮತ್ತು ವಿರೋಧಗಳಿಂದ ಜಾತಿಗಳ ಮಧ್ಯೆ ವೈಷಮ್ಯ ಬೆಳೆಯತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನ್ನಡೆಯಾಗುತ್ತಿದ್ದು, ಇತರ ಪಕ್ಷಗಳಿಗೆ ಅನುಕೂಲವಾಗುತ್ತ್ತಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಂದಾಗಿ ಪಕ್ಷವನ್ನು ಉಳಿಸಬೇಕಿದೆ ಎಂದು ಹೇಳಿದರು.

       ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾನರಸಪ್ಪ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಜಿಪಂ ಸದಸ್ಯ ಪ್ರಸನ್ನಕುಮಾರ್, ತಾಪಂ ಅಧ್ಯಕ್ಷ ಕೆಂಪಣ್ಣ, ಉಪಾಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ಸದಸ್ಯರಾದ ಟಿ,ಸಿ ರಾಮಯ್ಯ, ಈರಣ್ಣ, ವೆಂಕಟಪ್ಪ, ಪಪಂ ಸದಸ್ಯ ನರಸಿಂಹಪ್ಪ, ನಾಗರಾಜು ಮಾಜಿ ಅಧ್ಯಕ್ಷ ಸಯಾದ್ ಸೈಫುಲಾ ಮುಖಂಡರಾದ ಬೈರಪ್ಪ, ವೆಂಕಟಪ್ಪ, ಗೊಂದಿಹಳ್ಳಿ ರಂಗರಾಜು, ವೆಂಕಟೇಶ್ ಮೂರ್ತಿ, ಸುರೇಶ್, ಅಶ್ವತ್ಥ್ ನಾರಾಯಣ್ ರಾಜು, ದೊಡ್ಡಯ್ಯ, ಮುಕ್ತ್ತಿಯಾರ್, ರವಿಕುಮಾರ್, ಜಯರಾಮು, ಎಸ್.ಎಲ್.ಎನ್ ಸ್ವಾಮಿ, ಆಟೋ ಕುಮಾರ್, ರಾಘವೇಂದ್ರ, ಮಯೂರಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap