ಚಿಕ್ಕನಾಯಕನಹಳ್ಳಿ
ಮೀನುಗಾರಿಕೆ ಅಭಿವೃದ್ಧಿಗಾಗಿ ಹಾಗೂ ಇದನ್ನೇ ವೃತ್ತಿಯನ್ನಾಗಿಸಿಕೊಂಡವರಿಗೆ ಸಹಾಯವಾಗಲಿ ಎಂದು ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್ ವಿತರಿಸಲಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಮೀನುಗಾರಿಕೆ ಇಲಾಖೆಯಲ್ಲಿ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ವತಿಯಿಂದ ತಾಲ್ಲೂಕಿನ ಬೋರನಕಣಿವೆ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಫಲಾನುಭವಿಗಳಿಗೆ ಮೀನುಗಾರಿಕೆ ಮಾಡಲು ಬೋಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಬೋರನಕಣಿವೆಯಲ್ಲಿ ಸ್ವಲ್ಪ ಪ್ರಮಾಣದಷ್ಟು ನೀರಿದ್ದು ಅಲ್ಲಿ ಮೀನುಗಾರಿಕೆ ಮಾಡುತ್ತಿರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈಗ 16 ಜನ ಫಲಾನುಭವಿಗಳಿಗೆ ದೋಣಿ ಮಂಜೂರಾಗಿದೆ ಎಂದರು.
ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಎ.ಎಸ್.ಮಂಜುಶ್ರೀ ಮಾತನಾಡಿ, ಕಳೆದ ವರ್ಷದ ಬೋಟನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಬೋಟ್ ಬಂದದ್ದು ವಿಳಂಬವಾದ್ದರಿಂದ ಇಂದು ಬೋಟ್ ವಿತರಿಸಲಾಗಿದೆ. ಮಳೆ ಬಂದರೆ ತಾಲ್ಲೂಕಿನಲ್ಲಿ ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಬಹುದು ಎಂದ ಅವರು, ತಾಲ್ಲೂಕನ್ನು ಬರಗಾಲಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗುತ್ತಿದೆ ಹಾಗೂ ಇಂದು ಫಲಾನುಭವಿಗಳಾದ ಗಿರಿಜಮ್ಮ, ಶೃತಿ, ಅಮಾನುಲ್ಲಾ, ಜಾಕಿರ್, ಸುಬಾನ್, ಭೂತಮ್ಮ, ಸುಬಾನ್‍ಉಲ್ಲಾರವರಿಗೆ ಬೋಟ್ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಎಂ.ಕಮಲಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
