ತುಮಕೂರು
ಶಿರಾ ವಿಧಾನಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶಿರಾ ತಾಲ್ಲೂಕು ಮಾಗೋಡುವಿನಲ್ಲಿ ಮತದಾರರಿಗೆ ಇವಿಎಂ-ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಸಿ-ವಿಜಿಲ್ ಕುರಿತಂತೆ ಜಿಲ್ಲಾ ಪಂಚಾಯತಿ ಸಿಇಓ ಶುಭ ಕಲ್ಯಾಣ್ ಅವರು ಭಿತ್ತಿ ಪತ್ರ ಬಿಡುಗಡೆ ಮಾಡಿ ಅರಿವು ಮೂಡಿದರು.
ನವೆಂಬರ್ 3ರಂದು ನಡೆಯುವ ಸಿರಾ ವಿಧಾನಸಭಾ ಉಪಚುನಾವಣಾ ಸಂದರ್ಭದಲ್ಲಿ ಮತದಾನ ಕೇಂದ್ರದಲ್ಲಿರುವ ಸೌಲಭ್ಯಗಳು, ಇವಿಎಂ ವಿವಿ ಪ್ಯಾಟ್ ಬಗ್ಗೆ ಮಾಹಿತಿ, ಸಾರ್ವಜನಿಕರಿಗೆ ಮತದಾನದ ಅರಿವು, ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗೆ ಇರುವ ಸೌಲಭ್ಯಗಳ ಬಗ್ಗೆ ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರ ಬಳಸಿ ನಿಮ್ಮ ಮತ ಹೇಗೆ ಚಲಾಯಿಸುವುದು ಎಂಬ ಬಗ್ಗೆ ಮತ್ತು ಮತದಾನ ಖಾತ್ರಿ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಸಿಇಓ ಮಾಹಿತಿ ಒದಗಿಸಿದರು.
ಅಲ್ಲದೆ, ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷತಾ ವಾಹನಗಳು, ಸಾರ್ವಜನಿಕ ಆಟೋ ರಿಕ್ಷಾಗಳು ಹಾಗೂ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ ಸಂಗ್ರಹಣಾ ಆಟೋಗಳಲ್ಲಿ ಸಿ ವಿಜಿಲ್ ಆಪ್‍ನ ಬಳಕೆ ಬಗೆಗಿನ ಭಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಕೊವಿಡ್-19 ರ ಸೋಂಕನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು , ಮುಂದೆ ಅನೇಕ ಹಬ್ಬ ಮತ್ತು ಹರಿದಿನಗಳ ಸಮಯವಾಗಿರುವುದರಿಂದ ಈ ನಿಟ್ಟಿನಲ್ಲಿ ಕೋವಿಡ್-19 ರ ನಿಯಂತ್ರಣ ಕುರಿತಂತೆ ಪ್ರಮುಖ ಘೋಷ ವಾಕ್ಯವಾದ “ಮಾಸ್ಕ್ ಧಾರಣೆ, ಕರ ಶುಚಿತ್ವ ಮತ್ತು ಪರಸ್ಪರ ಆರು ಅಡಿಗಳ ಅಂತರ” ವನ್ನು ಕಾಯ್ದುಕೊಳ್ಳುವುದರ ಮೂಲಕ ರೋಗನಿಯಂತ್ರಣ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸುತ್ತಾ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕರೋನಾ ವಾರಿಯರ್ಸ್‍ಗಳಿಗೆ ಅಭಿನಂದನೆಗಳನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ, ಜಿಲ್ಲಾ ಪಂಚಾಯತ್ ಯೋಜನಾ ಅಭಿಯಂತರರಾದ ಜಿ.ಆರ್.ಶ್ರೀನಿವಾಸ್, ಜಿಲ್ಲಾ ಸಾಮಾಜಿಕ ಪರಿಶೋಧನಾ ಸಹಾಯಕ ಎಂ.ಎನ್. ಚಂದ್ರಶೇಖರ್, ತಾಲ್ಲೂಕು ಐಇಸಿ ಸಂಯೋಜಕ ಟಿ.ಕೆ.ವಿನುತ್, ಇವಿಎಂ ವಿವಿ ಪ್ಯಾಟ್ ಪ್ರಾತ್ಯಕ್ಷತಾ ತಂಡದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಾಗೋಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸ್ಥಳೀಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
