ತಿಪಟೂರು
ತಾಲ್ಲೂಕಿನ ಕಸಬಾ ಹೋಬಳಿಯ ಈಚನೂರು ಕೆರೆತುಂಬಿ ಕೋಡಿ ಬಿದ್ದುದರಿಂದ ಗುರುವಾರ ಶಾಸಕ ಬಿ.ಸಿ.ನಾಗೇಶ್ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಬಾರಿ ತಾಲ್ಲೂಕಿಗೆ ಅವಧಿಗೆ ಮುಂಚೆಯೇ ಹೇಮಾವತಿ ಜಲಾಶಯದಿಂದ ನೀರುಹರಿಸಬೇಕೆಂದು ನಾನು, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ತುರುವೇಕೆರೆ ಶಾಸಕ ಮಸಾಲ ಜಯರಾಂ ಮತ್ತು ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್ ಎಲ್ಲರೂ ಸೇರಿ ಜಲಸಂಪನ್ಮೂಲ ಸಚಿವರನ್ನು ಭೇಟಿಮಾಡಿ ಅವಧಿಗೆ ಮುಂಚೆ ತುಮಕೂರು ಹೇಮಾವತಿ ನಾಲೆಗೆ ನೀರು ಬಿಡುವಂತೆ ಮನವಿ ಸಲ್ಲಿಸಿದೆವು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು 15 ದಿನಗಳ ಮುಂಚೆಯೇ ನೀರು ಬಿಟ್ಟಿದ್ದರಿಂದ ಮತ್ತು ನಗರಸಭೆಯ ಅಧಿಕಾರಿಗಳು, ಅಧ್ಯಕ್ಷರುಗಳ ಪರಿಶ್ರಮದಿಂದ ಇಂದು ಕೆರೆ ತುಂಬಿದೆ ಎಂದರು.
ಒಂದು ಕಡೇ ಅನಾವೃಷ್ಠಿಯಾಗುತ್ತಿದೆ. ಕೊಡಗು ಮತ್ತು ಮಲೆನಾಡಿನಲ್ಲಿ ಅನಾವೃಷ್ಠಿಯಿಂದ ಜಲಾಶಯಗಳು ತುಂಬಿತುಳುಕುವ ಜೊತೆಗೆ ಅಪಾರವಾದ ನಷ್ಟವನ್ನುಂಟುಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ನಾವು ನೀರಿಗಾಗಿ ಕಾಯುತ್ತಿದ್ದೇವೆ. ಈಗ ತಿಪಟೂರು ಸೇರಿದಂತೆ ಅಕ್ಕಪಕ್ಕದ ತಾಲ್ಲೂಕಿನಲ್ಲಿ ಮಳೆಯ ಕೊರತೆ ಇದ್ದು ರೈತರು ತೊಂದರೆಯಲ್ಲಿದ್ದಾರೆ. ಆದ್ದರಿಂದ ಗಂಗಾಪೂಜೆ ಸಲ್ಲಿಸಿ ಉತ್ತಮಮಳೆ, ಬೆಳೆಯಾಗಲೆಂದು ದೇವರಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಟಿ.ಎನ್.ಪ್ರಕಾಶ್, ಉಪಾಧ್ಯಕ್ಷೆ ಜಹರಾ ಜಬೀನ್, ಸದಸ್ಯರಾದ ಪ್ರಸನ್ನ, ರಾಮ್‍ಮೋಹನ್, ಪ್ರಸನ್ನಕುಮಾರ್, ಹರಿಬಾಬು, ರೇಖಾ ಅನೂಪ್, ನಿಜಗುಣ, ಮುಖಂಡರಾದ ಮಹೇಶ್, ಕೆ.ಬಿ.ಬಸವರಾಜು, ಈಚನೂರು ಗ್ರಾ.ಪಂ ಅಧ್ಯಕ್ಷ ಗಿರೀಶ್, ಸದಸ್ಯ ನರಸಿಂಹಮೂರ್ತಿ ಮುಂತಾದವರಿದ್ದರು.








