ಉಕ್ಕಿ ಹರಿಯುತ್ತಿರುವ ತುಂಗಭದ್ರೆ: ಸಂಪರ್ಕ ಕಡಿತ

ದಾವಣಗೆರೆ:

      ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಜೀವನದಿ ತುಂಗಭದ್ರೆಯಿಂದಾಗಿ ಅನೇಕ ಗ್ರಾಮಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿದ್ದು, ಹಲವಾರು ಗ್ರಾಮ, ಊರುಗಳ ಸಂಪರ್ಕವೇ ಕಡಿತಗೊಂಡಿದೆ.

      ಭಾರೀ ಮಳೆಯಿಂದಾಗಿ ನಿನ್ನೆಯಷ್ಟೇ 10.9 ಮೀಟರ್‍ನಷ್ಟು ಮೈದುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ಬುಧವಾರ 11.25 ಮೀಟರ್‍ಗೆ ಏರಿಕೆಯಾಗಿದ್ದು, ನದಿ ಪಾತ್ರದ ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲೂಕಿನ ಅನೇಕ ಗ್ರಾಮಗಳು, ಹೊಲ, ಗದ್ದೆ, ತೋಟಗಳು ಜಲಾವೃತವಾಗಿದೆ. ಉಕ್ಕಡಗಾತ್ರಿ ಗ್ರಾಮವಂತೂ ಜಲಾವೃತವಾಗಿದ್ದು, ಜನರು ಪ್ರಾಣ ಕೈಯಲ್ಲಿ ಹಿಡಿದು ರಾತ್ರಿ ಕಳೆಯುವಂತಾಗಿದೆ.

      ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್‍ನ ತಗ್ಗು ಪ್ರದೇಶ ಜಲಾವೃತವಾಗಿದ್ದರೆ, ಬೇಲಿಮಲ್ಲೂರು, ಬೆನಕನಹಳ್ಳಿ, ಹರಿಹರ ತಾ. ಉಕ್ಕಡಗಾತ್ರಿ, ಸಾರಥಿ, ಚಿಕ್ಕಬಿದರೆ, ಹರಪನಹಳ್ಳಿ ತಾ. ಗರ್ಭಗುಡಿ, ಹಲವಾಗಲು ಸೇರಿದಂತೆ ಅನೇಕ ಗ್ರಾಮಗಳು ಜಲಾವೃತವಾಗಿದೆ. ಸಾವಿರಾರು ಎಕರೆ ಪ್ರದೇಶದ ಹೊಲ, ಗದ್ದೆ, ತೋಟ ಜಲಾವೃತವಾಗಿದ್ದು, ಕ್ಷಣಕ್ಷಣಕ್ಕೂ ನೀರಿನ ಹರಿವಿನ ಪ್ರಮಾಣ ಏರುತ್ತಲೇ ಇದೆ.
ರಾಜನಹಳ್ಳಿ ಸಮೀಪದ ದಾವಣಗೆರೆಗೆ ಕುಡಿಯುವ ನೀರು ಪೂರೈಸುವ ಜಾಕ್‍ವೆಲ್, 22 ಕೆರೆ ಏತ ನೀರಾವರಿ ಯೋಜನೆ ಜಾಕ್‍ವೆಲ್‍ಗಳು ಸಂಪೂರ್ಣ ಜಲಾವೃತವಾಗಿದ್ದು, ಯಾವ ಕ್ಷಣದಲ್ಲಾದರೂ ಅವು ಮುಳುಗಡೆಯಾಗುವ ಅಪಾಯವೂ ಇಲ್ಲದಿಲ್ಲ. ಸದ್ಯಕ್ಕೆ ಜಾಕ್‍ವೆಲ್‍ಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವ ತುಂಗಭದ್ರಾ ನದಿಯ ಆರ್ಭಟ ನೋಡಲು ಜನ ಸಾಗರವೇ ಬರುತ್ತಿದೆ.

      ಇನ್ನು ಹರಿಹರ, ರಾಣೆಬೆನ್ನೂರು ತಾಲೂಕಿನಲ್ಲಿ ನದಿ ಪಾತ್ರದ ಇಟ್ಟಿಗೆ ಭಟ್ಟಿಗಳು ಸಂಪೂರ್ಣ ಜಲಾವೃತವಾಗಿದ್ದು, ನೋಡ ನೋಡುತ್ತಲೇ ತುಂಗಭದ್ರೆಯು ಅದೆಲ್ಲವನ್ನೂ ತನ್ನೊಡಲೊಳಗೆ ತುಂಬಿಕೊಳ್ಳುತ್ತಿದ್ದಾಳೆ. ಇಟ್ಟಿಗೆ ಭಟ್ಟಿ ಮಾಲೀಕರೂ ಸಹ ದಿಕ್ಕು ತೋಚದೇ, ಸಾಲ ಸೋಲ ಮಾಡಿ, ನಿರ್ಮಿಸಿದ್ದ ಇಟ್ಟಿಗೆ ಭಟ್ಟಿಯು ಕರಗಿ, ತುಂಗಭದ್ರೆಯ ಒಡಲನ್ನು ಸೇರುತ್ತಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟವೂ ಹೆಚ್ಚುತ್ತಲೇ ಇದೆ.

      ನೆರೆ ಸಂತ್ರಸ್ಥರ ಅನುಕೂಲಕ್ಕಾಗಿ ನದಿ ಪಾತ್ರದ ಪಟ್ಟಣ, ನಗರ, ಗ್ರಾಮೀಣ ಭಾಗದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತುಂಗಭದ್ರಾ ನದಿಯು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿರುವುದಲ್ಲದೇ, ಅನೇಕ ಗ್ರಾಮಸ್ಥರಿಗೆ ಸುರಕ್ಷಿತ ಜಾಗಕ್ಕೆ ತೆರಳ ಲು, ನದಿಪಾತ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಅಪಾಯದಲ್ಲಿ ಸಿಲುಕಿದವರ ರಕ್ಷಣೆಗಾಗಿಯೂ ಜಿಲ್ಲಾಡಳಿತ, ಆಯಾ ತಾಲೂಕು ಆಡಳಿತಗಳು ಸುರಕ್ಷತಾ ಕ್ರಮ ಕೈಗೊಂಡಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link