ಬೆಂಗಳೂರು:
ಶಾಲಾ ಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.
ನಗರದ ಖಾಸಗಿ ಪಂಚತಾರಾ ಹೋಟಲೆನಲ್ಲಿಂದು ನಡೆದ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಾಗಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಶಾಲೆಯ ಮಕ್ಕಳಿಗೂ ಉಚಿತ ಬಸ್‍ಪಾಸ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸಾರಿಗೆ ಇಲಾಖೆ ಹಾಗೂ ಹಣಕಾಸು ಇಲಾಖೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದ್ದು, ಮುಖ್ಯಮಂತ್ರಿಗಳೇ ಸೂಕ್ತ ತೀರ್ಮಾನ ಮಾಡುತ್ತಾರೆ ಎಂದರು.
ಶಾಲೆಗಳು ಆರಂಭವಾಗಿ ಅರ್ಧ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಉಚಿತ ಬಸ್‍ಪಾಸ್ ಬಗ್ಗೆ ತೀರ್ಮಾನವಾಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳಿಗೆ ಎಲ್ಲವೂ ಗೊತ್ತಿದೆ ಅವರೇ ತೀರ್ಮಾನ ಮಾಡುತ್ತಾರೆ. ಇದರಲ್ಲಿ ತಮ್ಮದೇನು ಇಲ್ಲ ಎಂದರು. ಸರ್ಕಾರ ಟೇಕಾಆಪ್ ಆಗಿಲ್ಲ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಜಿಲ್ಲಾ ಮಟ್ಟದಲ್ಲಿ ಕೆಲಸಗಳು ಸುಗಮವಾಗಿ ನಡೆದಿವೆ. ಸರ್ಕಾರ ಚಟುವಟಿಕೆಯಿಂದ ಇದೆ. ಉತ್ತಮ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಕೊಡಗಿನಲ್ಲಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರಿಗೆ ಎಲ್ಲ ರೀತಿಯ ನೆರವು ಒದಗಿಸುವಲ್ಲಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದರು. ಕೊಡಗಿನಲ್ಲಿ ಸುಮಾರು 3 ಸಾವಿರ ಕೋಟಿ ರೂ. ಹಾನಿಯಾಗಿದೇ. ಕೇರಳ ಮಾದರಿಯಲ್ಲೇ ಇಲ್ಲೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು. ಪ್ರಾಥಮಿಕ ಶಿಕ್ಷಣ ಇಲಾಖೆ ಕೊಡಗಿನ ಸಂತ್ರಸ್ತರ ನೆರವಿಗಾಗಿ ಶಾಲಾ ಶಿಕ್ಷಕರ ಒಂದು ದಿನದ ವೇತನ 45 ಕೋಟಿ ರೂ. ದೇಣಿಗೆಯಾಗಿ ನೀಡಿದೆ. ಇದರಲ್ಲಿ 4 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಪಡೆದು ಹಾಳಾಗಿರುವ ಶಾಲಾ ಕಟ್ಟಡಗಳ ದುರಸ್ತಿಗೆ ಬಳಕೆ ಮಾಡಲಿದೆ ಎಂದು ಅವರು ಹೇಳಿದರು.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಶುಲ್ಕ ನಿಯಂತ್ರಿಸಲು ಸದ್ಯದಲ್ಲೇ ಒಂದು ತೀರ್ಮಾನವನ್ನು ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲಾ ಉಸ್ತುವಾರಿ ಸಾ.ರ. ಮಹೇಶ್ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಒಬ್ಬರು ಮುಖ್ಯಮಂತ್ರಿ ಇದ್ದಾರೆ. ಮತ್ತೊಬ್ಬರು ಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ ಎಂದು ತಮ್ಮದೇ ಆದ ದಾಟಿಯಲ್ಲಿ ಸಿದ್ಧರಾಮಯ್ಯನವರಿಗೆ ಟಾಂಗ್ ನೀಡಿದರು.
ಇದಕ್ಕೂ ಮೊದಲು ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಭಾರತ ಸಾಕ್ಷರತೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 1901 ರಲ್ಲಿ ಶೇ. 6 ರಷ್ಟಿದ್ದ ಸಾಕ್ಷರತೆ ಈಗ ಶೇ. 74 ರಷ್ಟು ಆಗಿದೆ ಎಂದರು. ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಇಲಾಖೆ. ದೇಶ ಕಟ್ಟಲು ವ್ಯಕ್ತಿಗಳನ್ನು ಸೃಷ್ಟಿ ಮಾಡಬೇಕು. ಬೇರೆ ಇಲಾಖೆಯಂತೆ ಈ ಇಲಾಖೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಶಿಕ್ಷಣ ಎಂಬುದು ಸೇವಾ ವಲಯಕ್ಕೆ ಸೇರಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರ ವಲಯವಾಗಿ ಬದಲಾಗುತ್ತಿದೆ. ನಾಗರಿಕ ಸಮಾಜ ಸರ್ಕಾರ ಇದ್ದರೂ ಎಲ್‍ಕೆಜಿಗೆ 5 ಲಕ್ಷ ರೂ. ಡೋನೇಷನ್ ಕೇಳುತ್ತಿರುವುದು ಅಚ್ಚರಿ ಮೂಡಿಸುತ್ತದೆ.
ಎಲ್ಲವನ್ನೂ ಸರಿದಾರಿಗೆ ತರುವ ಅಗತ್ಯವಿದೆ ಎಂದು ಅವರು ಹೇಳಿದರು. ಭಾರತೀಯ ಸಮಾಜದ ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಸಮಗ್ರ ಶಿಕ್ಷಣ ಅಭಿಯಾನಕ್ಕೆ ಪೂರಕವಾಗಿ ಆರ್ಥಿಕ ಸ್ವಾವಲಂಬಿಯಾಗಿ ಕೌಶಲ್ಯಾಧಾರಿತ ಪಠ್ಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.