ಉತ್ತರದೊಂದಿಗೆ ಶೂದ್ರ ಪರಂಪರೆಯ ಕರ್ನಾಟಕದ ಸಂಘರ್ಷ

ದಾವಣಗೆರೆ

    ವೈದಿಕ ಸಂಸ್ಕೃತಿ ಹೊಂದಿರುವ ಉತ್ತರ ಭಾರತದ ಜೊತೆಗೆ, ಅವೈದಿಕ, ಸಿದ್ಧ ಹಾಗೂ ಶೂದ್ರ ಪರಂಪರೆಯನ್ನು ಹೊಂದಿರುವ ಕರ್ನಾಟಕ 9ನೇ ಶತಮಾನದಿಂದ ಈ ವರೆಗೂ ನಿರಂತರ ಸಂಘರ್ಷ ನಡೆಸಿಕೊಂಡು ಬಂದಿದೆ ಎಂದು ವಿಚಾರವಾದಿ ಡಾ.ಬಂಜಗೆರೆ ಜಯಪ್ರಕಾಶ್ ಪ್ರತಿಪಾದಿಸಿದರು.
      ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕರ್ನಾಟಕ ಪರಂಪರೆಯ ಜಾತ್ಯಾತೀತ ನೆಲೆಗಳು ಎಂಬ ವಿಷಯವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಏರ್ಪಡಿಸಿದ್ದ ಮೊದಲ ಗೋಷ್ಠಿಯಲ್ಲಿ ಭಕ್ತ ಕನಕದಾಸರ ಕುರಿತು ಮಂಡಿಸಿದ ಅವರು, ಭಾರತಕ್ಕೆ ಅದರದೇಯಾದ ವಿಶಿಷ್ಠ ನೆಲೆಗಳಿವೆ. ಅದರಲ್ಲೂ ಕರ್ನಾಟಕಕ್ಕೆ ಅನನ್ಯವಾದ ಪರಂಪರೆ ಇದೆ ಎಂದರು.
ಧರ್ಮ, ಸಂಸ್ಕೃತಿ ಹಾಗೂ ಆಡಳಿತದ ಹೆಸರಿನಲ್ಲಿ ಭಾರತೀಯರ ಮಧ್ಯೆಯೇ ಕಂದಕ ಸೃಷ್ಟಿಸುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ವೈದಿಕ ಕುಲ ಪರಂಪರೆಗೆ ವಿಶಿಷ್ಠವಾದ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ಕರ್ನಾಟಕದ್ದು, ಸಿದ್ಧ, ಅವೈದಿಕ ಹಾಗೂ ಶೂದ್ರ ಪರಂಪರೆಯಾಗಿದೆ. ಹೀಗಾಗಿ ಉತ್ತರದ ಜೊತೆಗೆ ನಮ್ಮ ರಾಜ್ಯ ನಿರಂತರ ಯುದ್ಧ ಮಾಡಿಕೊಂಡು ಬಂದಿದೆ. ಆದರೆ, ಇದನ್ನು ಕೆಲವರು ಮರೆಮಾಚುತ್ತಿದ್ದಾರೆಂದು ಆರೋಪಿಸಿದರು.

      ಉತ್ತರ ಭಾರತದಲ್ಲಿ ವ್ಯಾಪಾರ ಮಾಡುತ್ತಿದ್ದ ಜೈನರು ಭಾರತಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಹೀಗಾಗಿ ಕೃಷಿ ಮಾಡುವವರು ಒಕ್ಕಲಿಗರಾದರು. ಆದ್ದರಿಂದ ರಾಷ್ಟ್ರ ಕವಿ ಕುವೆಂಪು ಅವರ ಮನೆತನದವರು ಮೂಲದಲ್ಲಿ ಜೈನರಾಗಿದ್ದರು. ಹಾಗೂ ಕರ್ನಾಟದಲ್ಲಿ ದೇಸೀ ವ್ಯಾಪಾರ ನಡೆಸುತ್ತಿದ್ದವರು ಲಿಂಗಾಯತರಾದರು ಎಂದು ವಿಶ್ಲೇಷಿಸಿದರು.
ಕರ್ನಾಟಕದ ಬಹುಪಾಲು ಜಾತಿಗಳು ಜಾತಿಗಳಲ್ಲ, ಬದಲಿಗೆ ಅವು ಕುಲಗಳು. ಕರ್ನಾಟಕದ ಕುಲ ಪ್ರಜ್ಞೆ ಆರಂಭವಾದದ್ದೇ ಶೂದ್ರರಿಂದ. ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ ಇವರಿಗೆಲ್ಲಾ ಕುಲದ ಪ್ರಶ್ನೆ ಇರಲಿಲ್ಲ. ಹೀಗಾಗಿ ಇವರು ಕುಲವನ್ನು ಹೆಸರಿನ ಜೊತೆಯಲ್ಲಿಯೇ ಇಟ್ಟುಕೊಂಡಿದ್ದರು. ಆದರೆ, ಕುಲವೇ ಇರದ ಬಸವಣ್ಣನವರಿಗೆ ಕುಲದ ತಳಮಳ, ತಲ್ಲಣ್ಣ ಇತ್ತು. ಹೀಗಾಗಿಯೇ ಬಸವ ಶರಣ ಕುಲ ಪ್ರಜ್ಞೆಯನ್ನು ಕಟ್ಟಿದರು ಎಂದು ಬಣ್ಣಿಸಿದರು.
   ಕರ್ನಾಟಕದಲ್ಲಿ ಅರಸೊತ್ತಿಗೆಯನ್ನು ಕಟ್ಟಿದವರು ಕುರುಬರು, ಗೊಲ್ಲರು ಹಾಗೂ ಬೇಡರು. ಹೀಗಾಗಿಯೇ ಕನಕ ಕುರಬರವನೋ, ಬೇಡರವನೋ ಎಂಬ ಜಿಜ್ಞಾಸೆ ಇನ್ನೂ ಜೀವಂತವಾಗಿದೆ. ಯಾವ ದಾಸರೂ ರಚಿಸದಷ್ಟು ಆಳವಾದ ಹಾಗೂ ಅನುಭಾವ ಸಾಹಿತ್ಯವನ್ನು ಕನಕದಾಸರು ರಚಿಸಿದ ಕಾರಣಕ್ಕಾಗಿಯೇ ಕನಕದಾಸರ ಬಗ್ಗೆ ಹಲವು ದಂತ ಕಥೆಗಳಿದ್ದು, ಇವರ ನೇತೃತ್ವದ ಭಕ್ತಿ ಪಂಥ ವೈದಿಕ ಪರಂಪರೆಗೆ ಪರ್ಯಾಯ ಸಾಧ್ಯತೆಯನ್ನು ಕಟ್ಟಿಕೊಟ್ಟಿದೆ. ಕನಕದಾಸರು, ಶರಣರು ಮಠ ಕಟ್ಟಲಿಲ್ಲ. ಮರಿಗಳನ್ನು ಸಾಕಲಿಲ್ಲ. ಕರ್ನಾಟಕದ ಸ್ವಯಂ ಪ್ರಜ್ಞೆಯೇ ಕರ್ನಾಟಕವನ್ನು ಆಳಿದೆ. ಧರ್ಮ ಎಂದರೇ ಆಚರಣೆಯ ಮಾರ್ಗವಲ್ಲ, ನ್ಯಾಯ ಹಾಗೂ ಮೌಲ್ಯದ ಮಾರ್ಗ ಎಂದು ಪ್ರತಿಪಾದಿಸಿದರು.
ಬಸವಣ್ಣನವರ ಕುರಿತು ಮಾತನಾಡಿದ ಬರಹಗಾರ ಡಾ.ಲೋಕೇಶ ಅಗಸನಕಟ್ಟೆ, ಅವೈದಿಕ ನೆಲೆಗಳು ಹೊಸ ಚಿಂತನೆಯನ್ನು ಹುಟ್ಟು ಹಾಕುತ್ತಲೇ ಬಂದಿರುವ ಕಾರಣದಿಂದಲೇ ಕರ್ನಾಟಕದಲ್ಲಿ ಆರೋಗ್ಯಕರ ಚಿಂತನೆ ನಡೆಯುತ್ತಿದೆ. ವೇದ, ಆಗಮಗಳಿಂದ ಬಂದ ವೈದಿಕ ನೆಲೆಗಳ ವಿರುದ್ಧ ಬೌದ್ಧ ಹಾಗೂ ಜೈನರಿಂದ ಬಂದ ಅವೈದಿಕ ನೆಲೆಗಳು ಹೊಸ ಚಿಂತನೆಯನ್ನು ಹುಟ್ಟು ಹಾಕುತ್ತಾ ಬಂದಿವೆ. ಸಮಾಜ ಕಟ್ಟುವಲ್ಲಿ ಅವೈದಿಕ ನೆಲೆಗಳ ಪಾತ್ರ ಬಹುದೊಡ್ಡದಾಗಿದೆ. ಆದರೆ, ವೈದಿಕ ನೆಲೆಗಳ ಕೊಡುಗೆ ಶೂನ್ಯವಾಗಿದೆ. ಅವೈದಿಕ ನೆಲೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯೇ ಮೂಲ ಪ್ರೇರಣೆಯಾಗಿದೆ ಎಂದರು.
      ಬಸವಣ್ಣನವರು ಜಂಗಮ ಚಿಂತನೆಯನ್ನು ಮುನ್ನೆಲೆಗೆ ತರುವ ಉದ್ದೇಶದಿಂದಲೇ ಮಠ, ದೇವಾಲಯಗಳ ಚಿಂತನೆ ಹೊಡೆದು ಹಾಕಿ, ದೇವಾಲಯ ಸಂಸ್ಕೃತಿಯನ್ನು ನಿರಾಕರಿಸಿ, ದೇಹವೇ ದೇವಾಲಯ ಎಂಬುದಾಗಿ ಪ್ರತಿಪಾದಿಸಿದ್ದರು. ಎಲ್ಲಾ ಜನ ವರ್ಗಗಳನ್ನು ಆತ್ಮಗೌರವದಿಂದ ಬಾಳುವಂತೆ ಮಾಡಿದ ಬಸವ, ವೃತ್ತಿಗಳಿಗೂ ಆತ್ಮಗೌರವವರನ್ನು ತಂದುಕೊಟ್ಟಿದ್ದರು. ಬಸವಣ್ಣನವರ ಜಾತಿಗಿಂತ, ಅವರ ಜಾತ್ಯಾತೀತ ಚಿಂತನೆ, ತತ್ವಗಳನ್ನು ಅನುಷ್ಠಾನಗೊಳಿಸಿ, ಮತ್ತಷ್ಟು ವಿಸ್ತರಿಸಬೇಕಾದ ಅವಶ್ಯಕತೆ ಇದೆ ಎಂದರು.
     ಶಿಶುನಾಳ ಷರೀಫರ ಕುರಿತು ವಿಚಾರ ಮಂಡಿಸಿದ ಚಿಂತಕ ಡಾ.ಎಸ್.ನಟರಾಜ ಬೂದಾಳು, ತತ್ವ ಪದಗಳು ಬದಕುವ ಪದ್ಯಗಳಾಗಿವೆ. ಆದರೆ, ಅವುಗಳನ್ನು ಹಾಡುವ ನಾವು ಆ ಪದಗಳಲ್ಲಿರುವ ಮೌಲ್ಯಗಳಂತೆ ಬದುಕುತ್ತಿಲ್ಲ. ಬದುಕದಿರುವ ಹಾಡು ಹಾಗೂ ಪದ್ಯಗಳಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ತತ್ವಪದಗಳು ಲಿಖಿತ ಹಾಗೂ ಮೌಖಿಕ ಪರಂಪರೆಯಲ್ಲ, ಅವು ಬದುಕುವ ಪರಂಪರೆಯಾಗಿದೆ. ಶಿಶುನಾಳ ಷರೀಫರು ಗುರು ಮಾರ್ಗಿಯಾಗಿದ್ದಾರೆ. ಗುರು-ಶಿಷ್ಯರ ಸಂಬಂಧದಲ್ಲಿ ಯಾವ ಜಾತಿ-ಧರ್ಮಗಳ ಸಂಬಂಧ ಇರದು. ಬದಲಿಗೆ ಜ್ಞಾನ ವಿಚಾರದ ಸಂಬಂಧ ಇರುತ್ತದೆ. ಎಲ್ಲಾ ಬಿಟ್ಟು ಬಂದ ಶಿಶುನಾಳ ಷರೀಫರ ಆರಾಧನೆಗಾಗಿ ಬೃಹತ್ ಆಲಯ ಕಟ್ಟಿರುವುದು ಅವರಿಗೆ ಮಾಡುವ ದೊಡ್ಡ ಅಪಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
        ಗೋಷ್ಠಿ ಅಧ್ಯಕ್ಷತೆಯನ್ನು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ವಹಿಸಿದ್ದರು. ಪ್ರಾಧ್ಯಾಪಕ ಎಂ.ಸಿ.ಮಂಜುನಾಥ ಗೋಷ್ಠಿ ನಿರ್ವಹಿಸಿದರು. ಎ.ಬಿ.ಬಸಪ್ಪ ಸ್ವಾಗತಿಸಿದರು.

        ದಕ್ಷಿಣ ಭಾರತದಲ್ಲಿ ವೈದಿಕ ಬ್ರಾಹ್ಮಣರು ವಿರಳ ಆದರೆ, ಇಲ್ಲಿ ಲೌಕಿಕ ಬ್ರಾಹ್ಮಣರಿದ್ದಾರೆ. ಇವರನ್ನು 2ನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ. ಹಿಂದೂತ್ವದ ಉಗ್ರ ಪ್ರತಿಪಾದಕರಂತೆ ವರ್ತಿಸುತ್ತಿರುವ ಎಸ್.ಎಲ್.ಭೈರಪ್ಪ ವೈದಿಕ ಬ್ರಾಹ್ಮಣರಲ್ಲ. ಅವರು ಹೊಯ್ಸಳ ಕರ್ನಾಟಕ ಬ್ರಾಹ್ಮಣರಾಗಿದ್ದಾರೆ. ಹೀಗಾಗಿ ವೈದಿಕ ಬ್ರಾಹ್ಮಣರು ಲೌಕಿಕ, ಹೊಯ್ಸಳ ಹಾಗೂ ಗೌಡ ಸಾರಸ್ವತ ಬ್ರಾಹ್ಮಣರನ್ನು ಶೇಷ್ಠರೆಂದು ಭಾವಿಸೊಲ್ಲ ಹಾಗೂ ಇವರನ್ನು ಸಹಪಂಕ್ತಿಯ ಭೋಜನಕ್ಕೂ ಆಹ್ವಾನಿಸುವುದಿಲ್ಲ.
-ಡಾ.ಬಂಜಗೆರೆ ಜಯಪ್ರಕಾಶ್,
ವಿಚಾರವಾದಿ.

Recent Articles

spot_img

Related Stories

Share via
Copy link