ಉತ್ಪಾದನೆ ಸ್ಥಗಿತಕ್ಕೆ ಮುಂದಾಗಿರುವ ಗಾರ್ಮೇಂಟ್ಸ್

ದಾವಣಗೆರೆ :

 ಮೂಲಭೂತ ಸೌಕರ್ಯದಿಂದ ನರಳುತ್ತಿರುವ ಕರೂರು ಜವಳಿ ಪಾರ್ಕ್  

-ವಿನಾಯಕ ಪೂಜಾರ್

      ಇಲ್ಲಿನ ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್ ಆರಂಭಿಸುತ್ತಿದ್ದಂತೆ, ದೇವನಗರಿಯ ಜನರಲ್ಲಿ ದಾವಣಗೆರೆಯಲ್ಲಿ ಮತ್ತೆ ಕರ್ನಾಟಕದ ಮ್ಯಾಂಚೆಸ್ಟರ್‍ನ ಗತವೈಭವ ಮರುಕಳಿಸಲಿದೆ ಎಂಬ ನಿರೀಕ್ಷೆ ಮನೆ ಮಾಡಿತ್ತು. ಆದರೆ, ಕೆಐಎಡಿಬಿ ಈ ಜವಳಿ ಪಾರ್ಕ್‍ನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಆರಂಭವಾಗಿದ್ದ ಗಾರ್ಮೇಂಟ್ಸ್‍ಗಳು ಉತ್ಪಾದನೆ ಸ್ಥಗಿತಗೊಳಿಸುತ್ತಿವೆ. ಹೀಗಾಗಿ ಜನರ ನಿರೀಕ್ಷೆ ಹುಸಿಯಾದಂತಾಗಿದೆ.

      ಹೌದು… ಹಿಂದೆ ಕರ್ನಾಟಕದ ಮ್ಯಾಂಚೇಸ್ಟರ್ ಎಂಬ ಖ್ಯಾತಿಗೆ ಒಳಗಾಗಿದ್ದ ದಾವಣಗೆರೆಯಲ್ಲಿ ಕಾಲ ಕ್ರಮೇಣ ಕೆಲ ಕಾರಣಗಳಿಂದ ಜವಳಿ ಮಿಲ್‍ಗಳು ಬಂದ್ ಆದ ಕಾರಣಕ್ಕೆ ಜವಳಿ ಕ್ಷೇತ್ರದಲ್ಲಿ ದಾವಣಗೆರೆ ಹೆಸರು ಇತಿಹಾಸದ ಪುಟ ಸೇರಿಬಿಟ್ಟಿತ್ತು. ಆದರೆ, ಮತ್ತೆ ಇಲ್ಲಿ ಜವಳಿ ಉದ್ಯಮ ಸ್ಥಾಪಿಸಿ, ಹಿಂದಿನ ಗತವೈಭವ ಮರುಕಳಿಸಬೇಕೆಂಬ ಉದ್ದೇಶದಿಂದ ಹೊರ ವಲಯದ ಕರೂರು ಕೈಗಾರಿಕ ಪ್ರದೇಶದಲ್ಲಿ 82 ಎಕರೆ ಪ್ರದೇಶದಲ್ಲಿ 2009ರಲ್ಲಿ ಟೆಕ್ಸಟೈಲ್ ಪಾರ್ಕ್ ಆರಂಭಿಸಿ 82 ಜನ ಉದ್ಯಮಿಗಳಿಗೆ ನಿವೇಶನ ಮಂಜೂರು ಮಾಡಿತ್ತು. ಈ ಪೈಕಿ ಈಗಾಗಲೇ 63 ಜನ ಉದ್ಯಮಿಗಳು ವಿದ್ಯುನ್ಮಾನ ಮಗ್ಗ ಘಟಕಗಳನ್ನು ಅಳವಡಿಸಿ ಗಾಮೇಂಟ್ಸ್ ಆರಂಭಿಸಿ ಬಟ್ಟೆ ಉತ್ಪಾದನೆಗೆ ಮುಂದಾಗಿದ್ದರು. ಆದರೆ, ಇಲ್ಲಿ ಯುಜಿಡಿ ಸಂಪರ್ಕ ಕಲ್ಪಿಸದ ಕಾರಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸುಮಾರು 19 ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸ್ಥಿತಿಗೆ ತಲುಪಿವೆ.

      ವಿದ್ಯುನ್ಮಾನ ಮಗ್ಗಗಳಲ್ಲಿ ಉತ್ಪಾದನೆಯಾಗುವ ಬಟ್ಟೆಗಳಿಗೆ ಅಂತಿಮ ರೂಪ ಕೊಡಲು ಡೈಯಿಂಗ್, ವಾಷಿಂಗ್ ಯುನಿಟ್‍ಗಳನ್ನು ಅಳವಡಿಸುವುದು ಅತ್ಯವಶ್ಯವಾಗಿದೆ. ಆದರೆ, ಈ ಜವಳಿ ಪಾರ್ಕ್ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕೆಐಎಡಿಬಿ ಇಲ್ಲಿ ಯುಜಿಡಿ ಸೌಲಭ್ಯ ಕಲ್ಪಿಸಿಲ್ಲ ಹಾಗೂ ಡೈಯಿಂಗ್ ಯುನಿಟ್ ಅಳವಡಿಸಲು ನಿವೇಶನವನ್ನು ಸಹ ನೀಡಿಲ್ಲ. ಆದ್ದರಿಂದ ಡೈಯಿಂಗ್, ವಾಷಿಂಗ್ ಮಾಡಿಸಲು ಜವಳಿ ಉದ್ಯಮಿಗಳು ಬೇರೆ ರಾಜ್ಯಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತಿದೆ. ಆದ್ದರಿಂದ ಮೂಗಿಗಿಂತ ಮೂಗ್ತಿ ಭಾರ ಎಂಬುವಂತೆ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜವಳಿ ಕ್ಷೇತ್ರದಲ್ಲಿ ಬಂಡವಾಳ ವಿನಿಯೋಗಿಸಿ ಕೈ ಸುಟ್ಟುಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದು ಬಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕೆಲ ಜವಳಿ ಉದ್ಯಮಿಗಳು ಬಂದಿದ್ದಾರೆ.

      ಯುಜಿಡಿ ಇಲ್ಲದ ಕಾರಣ ರೀಲ್‍ಗಳನ್ನು ಆಂಧ್ರಪ್ರದೇಶ, ಬಾಂಬೆ, ಗುಜರಾತ್ ಸೇರಿದಂತೆ ಇನ್ನಿತರ ಕಡೆಯಿಂದ ರೀಲ್‍ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಸಣ್ಣ ಗಾರ್ಮೆಂಟ್ಸ್‍ಗಳು ದಿನವೊಂದಕ್ಕೆ 400 ಶರ್ಟ್‍ಗಳನ್ನು ತಯಾರು ಮಾಡಿದರೆ, ದೊಡ್ಡ ಗಾರ್ಮೆಂಟ್ಸ್‍ಗಳು 1000 ಕ್ಕೂ ಹೆಚ್ಚು ಶರ್ಟ್‍ಗಳನ್ನು ತಯಾರು ಮಾಡುತ್ತಿವೆ. ಒಂದು ಶರ್ಟ್ ಡೈಯಿಂಗ್‍ಗೆ 15ರಿಂದ 20 ರೂ., ವಾಷಿಂಗ್‍ಗೆ 8ರಿಂದ10 ರೂ., ಟ್ರಾನ್ಸ್‍ಪೆÇೀರ್ಟ್‍ಗೆ 15 ರೂಪಾಯಿಗಳು ವೆಚ್ಚ ತಗಲುತ್ತಿದೆ. ಇದಷ್ಟೆಯಲ್ಲದೇ, ಜಿಎಸ್‍ಟಿ ಸಹ ಹೊರೆಯಾಗಿದೆ. ಆದ್ದರಿಂದ ಪ್ರತಿದಿನ ಸಣ್ಣ ಗಾರ್ಮೆಂಟ್ಸ್ 5,000 ರೂಗಳನ್ನು ಹಾಗೂ ದೊಡ್ಡ ಗಾರ್ಮೆಂಟ್ಸ್ 8000 ರೂಗಳಷ್ಟು ನಷ್ಟ ಅನುಭವಿಸುತ್ತಿವೆ.

      ಯುಜಿಡಿ ಕಾಮಗಾರಿ ಕೈಗೊಳ್ಳದ ಕೆಐಎಡಿಬಿ ನೀರಿನ ಸೌಲಭ್ಯವನ್ನು ಸರಿಯಾಗಿ ನೀಡಿಲ್ಲ. ಕೊಳವೆ ಬಾವಿ ಕೊರೆಸಿದರೆ ಗಡಸು ನೀರು ಬರುತ್ತದೆ. ಈ ನೀರನ್ನು ಮತ್ತೆ ಶುದ್ಧಿಕರಿಸಲು ರಾಸಾಯನಿಕ ವಸ್ತುಗಳನ್ನು ಹಾಕಬೇಕಾಗಿದೆ. ಹೀಗಾಗಿ ಗಾರ್ಮೆಂಟ್ಸ್ ಉದ್ಯಮಿಗಳಿಗೆ ಮತ್ತಷ್ಟು ಹೊರೆಯಾಗಿದೆ. ಇದಲ್ಲದೇ ರಸ್ತೆ, ಬೀದಿ ದೀಪ ಸೇರಿದಂತೆ ಜವಳಿ ಪಾರ್ಕ್ ಮೂಲಭೂತ ಸೌಲಭ್ಯಗಳಿಲ್ಲದೇ ಬಳಲುತ್ತಿದೆ. ಈ ಎಲ್ಲಾ ಕಾರಣಗಳಿಂದ ಗಾರ್ಮೇಂಟ್ಸ್ ಮುಚ್ಚುವ ನಿರ್ಧಾರಕ್ಕೆ ಕೆಲ ಉದ್ಯಮಿಗಳು ಮುಂದಾಗಿದ್ದಾರೆ. ಹೀಗಾಗಿ ದಾವಣಗೆರೆಯಲ್ಲಿ ಜವಳಿ ಉದ್ಯಮ ಮತ್ತೆ ತನ್ನ ಗತವೈಭವವನ್ನು ಮರು ಸೃಷ್ಟಿಸಲಿದೆ ಎಂಬ ಜನರ ನಿರೀಕ್ಷೆ ಹುಸಿಯಾಗ ತೊಡಗಿದೆ.

      ರಾಜ್ಯದ ಯಾವ ಕೈಗಾರಿಕೆ ಪ್ರದೇಶಗಳಲ್ಲೂ ಯುಜಿಡಿ ಕಾಮಗಾರಿ ಕೈಗೊಂಡಿಲ್ಲ. ಆದರೂ ಜಿಲ್ಲೆಯಲ್ಲಿ ಲೋಕ ಅದಾಲತ್‍ನಲ್ಲಿ ದೂರು ಬಂದಿದೆ. ಹೀಗಾಗಿ ಕರೂರು ಕೈಗಾರಿಕಾ ಪ್ರದೇಶದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ನಾಲ್ಕು ವರ್ಷಗಳ ಹಿಂದೆಯೇ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
– ಬಸವರಾಜಪ್ಪ,
ಕೆಐಎಡಿಬಿ ಅಧಿಕಾರಿ.

Recent Articles

spot_img

Related Stories

Share via
Copy link