ಉದ್ಘಾಟನೆಯಾಗದ ಕಿರು ಮಾರಾಟಗಾರರ ವಲಯ..!

ತುಮಕೂರು

ವಿಶೇಷ ವರದಿ:ರಾಕೇಶ್.ವಿ.

    ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿ ಆಯ್ದ ವಾರ್ಡುಗಳ ಅಭಿವೃದ್ಧಿ ಜೊತೆಗೆ ಪ್ಯಾನ್ ಸಿಟಿ ಅಭಿವೃದ್ಧಿ ಹೆಸರಿನಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಒಂದಾಗಿ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಭಾಗದಲ್ಲಿ ಮಾಡಲಾದ ಅಭಿವೃದ್ಧಿ ಕಾಮಗಾರಿಯಲ್ಲಿ ಕಳಪೆ ಇದೆ ಎಂಬುದು ಸ್ಥಳೀಯರ ಆರೋಪವಾಗಿದೆ.

     ಹೌದು ಬರೊಬ್ಬರಿ 34 ಲಕ್ಷ ರೂಗಳನ್ನು ವೆಚ್ಚಮಾಡಿ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಲಾದ ಈ ಜಾಗವು, ಹಿಂದೆ ಇದ್ದದ್ದಕ್ಕೂ ಬದಲಾಗಿ ಇದೀಗ ಕೊಂಚ ಅಭಿವೃದ್ಧಿ ಕಂಡರೂ ಮಾಡಲಾದ ಕೆಲಸವು ಕಳಪೆಯಿಂದ ಕೂಡಿದೆ ಎಂಬುದಾಗಿ ಕೆಲವರು ಆರೋಪಿಸುತ್ತಿದ್ದಾರೆ. ಜೊತೆಗೆ ಕಾಮಗಾರಿ ಮುಗಿದ ನಂತರ ಅದು ಜನರ ಉಪಯೋಗಕ್ಕೆ ತರುವ ಮುನ್ನ ಮಾಡಬೇಕಾದ ಉದ್ಘಾಟನೆ ಕಾರ್ಯಕ್ರಮವನ್ನು ಕೂಡ ಮಾಡಿಲ್ಲ. ಹೀಗಿದ್ದಾಗ ಆ ಕಾಮಗಾರಿ ಪೂರ್ಣವಾಗಿದೆ ಎಂದು ಜನಕ್ಕೆ ಹೇಗೆ ಗೊತ್ತಾಗಬೇಕು ಎಂಬುದು ಒಂದು ಪ್ರಶ್ನೆಯಾಗಿದೆ.

     ಉಪ್ಪಾರಹಳ್ಳಿ ಫ್ಲೈಓವರ್‌ನ ಕೆಳಭಾಗದ ನಿರುಪಯೋಗಿ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಿರು ವ್ಯಾಪಾರ ವಲಯವನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕಾಗಿ ಸೇತುವೆಯ ಕಂಬಗಳಿಗೆ ಬಳಿದಿರುವ ಬಣ್ಣ ಕಿತ್ತು ಬೀಳುತ್ತಿದೆ. ಬಣ್ಣ ಬಳಿಯುವ ಮುನ್ನ ಅನುಸರಿಸಬೇಕಾದ ಕ್ರಮ ಅನುಸರಿಸದೆ ಈ ಅವಸ್ಥೆಯಾಗಿದೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

     ಕಳೆದ ಜೂನ್ ತಿಂಗಳಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಬಣ್ಣ ಬಳಿಯಲಾಗುತ್ತಿತ್ತು. ಅಂದೇ ಅದನ್ನು ಪರಿಶೀಲಿಸಿದ್ದ ಸ್ಥಳೀಯ ಕಾರ್ಪೋರೇಟರ್ ಬಣ್ಣ ಪೆಚ್ಚುಗಳಾಗಿ ಉದುರುತ್ತಿರುವುದನ್ನು ಕಂಡು ಸ್ಮಾರ್ಟ್ ಸಿಟಿ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಲು ಒತ್ತಾಯಿಸಿದ್ದರು. ಆದರೆ ಅದು ಸಫಲವಾಗಿಲ್ಲ ಎಂದೆನಿಸುತ್ತದೆ. ಸೇತುವೆಗೆ ಬಳಿದ ಬಣ್ಣ ಇಂದಿಗೂ ಉದುರುತ್ತಿರುವುದಾಗಿ ವಾಹನ ಸವಾರರು ತಿಳಿಸುತ್ತಾರೆ.

      ಇನ್ನೂ ನಗರದ ಸುಂದರ ವಾತಾವರಣ ನಿರ್ಮಾಣಕ್ಕಾಗಿ ಸೇತುವೆ ಅಡಿಯಲ್ಲಿನ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ವ್ಯಾಪಾರ ಮಾಡಿಕೊಳ್ಳಲು ಅನುಕೂಲವಾಗುವಂತೆ 10 ಮಳಿಗೆಗಳನ್ನು ನಿರ್ಮಾಣ ಮಾಡಲಾಡಲಾಗಿದೆ. ಅವುಗಳನ್ನು ಪಾಲಿಕೆ ವತಿಯಿಂದ ಹರಾಜು ಮಾಡಿ, ಟೆಂಡರ್ ಮೂಲಕ 7ಮಳಿಗೆಗಳನ್ನು ವಿತರಣೆ ಮಾಡಿದರೆ, ಉಳಿದ ಮೂರು ಮಳಿಗೆಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮೀಸಲಿಡಲಾಗಿದೆ.

      ಆ.30ರಂದು ಮಾಡಲಾದ ಹರಾಜಿನಲ್ಲಿ ಬ್ಯಾಟಪ್ಪ, ಲಿಂಗಣ್ಣ, ವರದರಾಜು ಆರ್., ರಾಮಕ್ಕ, ರಾಮಕೃಷ್ಣ, ಜೆ.ವಿನಯ್‌ಬಾಬು, ನಟರಾಜು ಆರ್. ಎಂಬುವವರು ಹರಾಜು ಕೂಗಿ ಮಳಿಗೆಗಳನ್ನು ಪಡೆದಿದ್ದಾರೆ. ತಿಂಗಳ ಬಾಡಿಗೆ ಲೆಕ್ಕಾಚಾರದಲ್ಲಿ ಇವರು ಬಾಡಿಗೆಹಣವನ್ನು ಪಾಲಿಕೆ ನೀಡಲಾಗುವುದು. ಆ ಬಂದ ಲಾಭದ ಹಣದಿಂದ ವಿದ್ಯುತ್ ಸೌಲಭ್ಯ, ಸ್ವಚ್ಛತೆ ಕಾಪಾಡುವದಕ್ಕೆ ಬಳಸಬೇಕಾಗಿದೆ. ಇದು ಒಂದು ಕಡೆಯಾದರೆ ಅಧಿಕಾರಿಗಳು ಹೇಳುವ ಪ್ರಕಾರ ರಸ್ತೆಯ ಪಕದಲ್ಲಿ ಯುಜಿಡಿ ಕಾಮಗಾರಿ ಮಾಡುತ್ತಿರುವುದರಿಂದ ಇನ್ನು ಮಳಿಗೆಗಳನ್ನು ತೆರೆದಿಲ್ಲ ಎನ್ನುವುದಾದರೆ ಇನ್ನೊಂದು ಕಡೆ ಆ ಮಳಿಗೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಾರ್ಕಿಂಗ್‌ಗೆ ಸ್ಥಳಾವಕಾಶ ಇಲ್ಲ

     ಸದ್ಯದಲ್ಲಿ ಅಭಿವೃದ್ಧಿ ಮಾಡಲಾದ 360 ಚದರ ಮೀಟರ್ ಜಾಗದಲ್ಲಿ ಕೇವಲ ಕುಳಿತು ಕೊಳ್ಳಲು ಆಸನದ ವ್ಯವಸ್ಥೆ, ಹಸಿರೀಕರಣಕ್ಕಾಗಿ ಗಿಡಗಳನ್ನು ನೆಡಲಾಗಿರುವುದು ಸೇರಿದಂತೆ ವ್ಯಾಪಾರ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ ಹೊರತು ಅಲ್ಲಿ ಯಾವುದೇ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಆದರೆ ಸಾರ್ವಜನಿಕರು ವಾಹನಗಳನ್ನು ಅಲ್ಲಿಯೇ ಪಾರ್ಕ್ ಮಾಡುತ್ತಾರೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬುದು ಕೆಲವರ ವಾದವಾಗಿದೆ.

ಶುದ್ಧಕುಡಿಯುವ ನೀರಿನ ಘಟಕ, ಶೌಚಾಲಯ ಅಗತ್ಯ

      ಸಾರ್ವಜನಿಕರ ಅನುಕೂಲಕ್ಕಾಗಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಮಾಡಿದ್ದು ಒಂದು ರೀತಿಯಲ್ಲಿ ಒಳ್ಳೆಯ ಕೆಲಸವೇ ಸರಿ. ಆದರೆ ಇಲ್ಲಿಗೆ ಬರುವಂತ ಸಾರ್ವಜನಿಕರಿಗೆ ಅಗತ್ಯವಾಗಿ ಒಂದು ಶುದ್ಧಕುಡಿಯುವ ನೀರಿನ ಘಟಕ ಹಾಗೂ ಸುಲಭ ಶೌಚಾಲಯವನ್ನು ನಿರ್ಮಾಣ ಮಾಡಬೇಕಿರುವುದು ಅತ್ಯವಶ್ಯಕವಾಗಿದೆ. ಕಾರಣ ಪಕ್ಕದಲ್ಲಿಯೇ ಸರ್ಕಾರಿ ಜೂನಿಯರ್ ಕಾಲೇಜು ಮೈದಾನವಿದೆ. ಜೊತೆಗೆ ಹತ್ತಿರದಲ್ಲಿ ಸರ್ಕಾರಿ ಹಾಸ್ಟೆಲ್‌ಗಳಿವೆ. ಸಂಜೆ ವೇಳೆಯಲ್ಲಿ ಒಡಾಡುವ ಜನರು ಹೆಚ್ಚಾಗಿರುತ್ತಾರೆ. ಹಾಗಾಗಿ ಅಲ್ಲಿ ಸುಲಭ ಶೌಚಾಲಯ ಹಾಗೂ ಶುದ್ಧಕುಡಿಯುವ ನೀರಿನ ಘಟಕ ಅತ್ಯವಶ್ಯಕವಾಗಿದೆ ಎನ್ನುತ್ತಾರೆ ಸ್ಥಳೀಯ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್.

ವ್ಯಾಪಾರಕ್ಕೆ ಅನಾನುಕೂಲ

      ಟೆಂಡರ್ ಮೂಲಕ ವ್ಯಾಪಾರ ಮಾಡಲು ಮುಂದಾಗಿರುವ ವ್ಯಾಪಾರಸ್ಥರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆಯೋ ಆಗಲಿ ಅನಾನುಕೂಲ ಮಾತ್ರ ಸಾಕಷ್ಟಿದೆ. ವ್ಯಾಪಾರ ಮಳಿಗೆಗಳ ಅಕ್ಕಪಕ್ಕದಲ್ಲಿ ಎರಡು ರಸ್ತೆಗಳು ಇದ್ದು ಎರಡೂ ಕಡೆಗಳಲ್ಲಿ ವಾಹನ ಸಂಚಾರ ಇರುತ್ತದೆ. ಇದರಿಂದ ಧೂಳು ಹೆಚ್ಚಾಗಿ ಬರುತ್ತದೆ. ಹಾಗಾಗಿ ಇಲ್ಲಿ ವ್ಯಾಪಾರ ಮಾಡುವುದು ಕಷ್ಟ ಸಾಧ್ಯವೇ ಸರಿ.

ಸೆಕ್ಯುರಿಟಿ ಅವಶ್ಯ

       ರಾತ್ರಿ ವೇಳೆಯಲ್ಲಿ ಪುಂಡ ಪುಡಾರಿಗಳು, ಮದ್ಯ ಪಾನಾಸಕ್ತರು ಮದ್ಯ ಸೇವಿಸಿ ಬಾಟಲಿಗಳನ್ನು ಅಲ್ಲಿಯೇ ಎಸೆಯುವುದು. ಅಲ್ಲದೆ ಗಲಾಟೆಗಳನ್ನು ಮಾಡುವುದು ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳ ತಾಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಇಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ನ ಅವಶ್ಯಕತೆ ತುಂಬಾ ಇದೆ ಎನ್ನುತ್ತಾರೆ ಸ್ಥಳೀಯರು.

ಬೀದಿ ಬದಿ ವ್ಯಾಪಾರಿಗಳ ಹಾವಳಿ

      ಬೀದಿ ಬದಿ ವ್ಯಾಪಾರಿಗಳ ಹಾವಳಿ ತಪ್ಪಿಸಿ ಕ್ರಮ ಬದ್ಧವಾಗಿ ಟೆಂಡರ್ ಮೂಲಕ ಮಳಿಗೆ ಪಡೆದುಕೊಂಡು ವ್ಯಾಪಾರ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಮಳಿಗೆಗಳನ್ನು ಮಾಡಿದರೂ ಮತ್ತೆ ಬೀದಿ ಬದಿ ವ್ಯಾಪಾರಿಗಳು ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಮಳಿಗೆ ತೆಗೆದುಕೊಂಡವರಿಗೆ ನಷ್ಟವಾಗುವುದರ ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡಾ ಉಂಟಾಗಲಿದೆ.

        ಮೇಲ್ಸೇತುವೆ ಕೆಳಭಾಗದಲ್ಲಿ ಅಭಿವೃದ್ಧಿ ಮಾಡಿ ಟೆಂಡರ್ ಕರೆದು ಮಳಿಗೆಗಳನ್ನು ವಿತರಣೆ ಮಾಡಲಾಯಿತಾದರೂ ಇಂದಿನವರೆಗೆ ಅದನ್ನು ಉದ್ಘಾಟನೆ ಮಾಡಿಲ್ಲ. ಈಗಾಗಲೇ ಎರಡು ಮಳಿಗೆಗಳಲ್ಲಿ ವ್ಯಾಪಾರ ಪ್ರಾರಂಭ ಮಾಡಲಾಗಿದೆ. ಆದರೆ ಉಳಿದ ಮಳಿಗೆಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದಿರುವುದಕ್ಕೆ ಇನ್ನು ಅವುಗಳನ್ನು ಪ್ರಾರಂಭ ಮಾಡಿಲ್ಲ. ಇದನ್ನು ಸರಿಪಡಿಸಿದ ನಂತರ ಸ್ಮಾರ್ಟ್ ಸಿಟಿಯವರು ಪಾಲಿಕೆಗೆ ಹಸ್ತಾಂತರಿಸಬೇಕಿತ್ತು.

ಗಿರಿಜಾಧನಿಯಾಕುಮಾರ್, 15ನೇ ವಾರ್ಡ್ ಸದಸ್ಯರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap