ತುಮಕೂರು
ನಗರದ ಉಪ್ಪಾರಹಳ್ಳಿ ಪ್ರದೇಶದಲ್ಲಿ ಸೌಲಭ್ಯಕ್ಕಿಂತ ಸಮಸ್ಯೆಗಳೇ ಹೆಚ್ಚು. ಇಲ್ಲಿ ಕುಡಿಯುವ ನೀರು, ರಸ್ತೆ ಚರಂಡಿ, ಬೀದಿದೀಪದಂತಹ ಕನಿಷ್ಠ ಅನುಕೂಲವೂ ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ.
ರೈಲ್ವೆ ಟ್ರ್ಯಾಕ್ನಿಂದ ಹೊರಗೆ ಎಂಬ ‘ಅಪಖ್ಯಾತಿ’ ಪಡೆದಿರುವ ಉಪ್ಪಾರಹಳ್ಳಿ ಹಾಗೂ ಸುತ್ತಮುತ್ತಲ ಬಡಾವಣೆಗಳಿಗೆ ನಗರದ ಕೇಂದ್ರ ಭಾಗದಿಂದ ಸರಾಗ ರಸ್ತೆ ಸಂಪರ್ಕವಿಲ್ಲ. 25 ವರ್ಷಗಳ ಹೋರಾಟ ನಂತರ ರೈಲ್ವೆ ಮೇಲು ಸೇತುವೆ ನಿರ್ಮಾಣಗೊಂಡರೂ, ಅದರ ಪ್ರಯೋಜನ ಅಷ್ಟಕಷ್ಟೆ ಎನ್ನುವಂತಾಗಿದೆ. ವಾಹನಗಳು ಮೇಲು ಸೇತುವೆ ಹಾದು ಹೋಗಬಹುದು. ಆದರೆ ಪಾದಚಾರಿಗಳು ಸೇತುವೆ ಹತ್ತಿ ಸುತ್ತಿಬಳಸಿ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೊಂದು ಹೋರಾಟ ಶುರುವಾಯಿತು. ಈ ವೇಳೆಗಾಗಲೇ ಅಲ್ಲಿದ್ದ ರೈಲ್ವೆ ಗೇಟ್ ಮುಚ್ಚಲು ಇಲಾಖೆ ತೀರ್ಮಾನಿಸಿತ್ತು. ಜನ ಓಡಾಡಲು, ಸೈಕಲ್, ದ್ವಿಚಕ್ರ ವಾಹನ ಸಂಚರಿಸಲು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಲು ಆ ಭಾಗದ ಜನ ಹೋರಾಟ ಆರಂಭಿಸಿದರು.
ತಾಂತ್ರಿಕವಾಗಿ ಈ ಭಾಗದಲ್ಲಿ ಅಂಡರ್ಪಾಸ್ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಹಾಗೂ ಬೇಕೇಬೇಕು ಎಂಬ ಜನರ ಒತ್ತಾಯ. ಈ ಹಗ್ಗಜಗ್ಗಾಟದಲ್ಲಿ ಸಂಸದ ಮುದ್ದಹನುಮೆಗೌಡರು ಆಸಕಿ ವಹಿಸಿ ಜನರ ಆಶಯಕ್ಕೆ ಧ್ವನಿಗೂಡಿಸಿದರು. ಕಡೆಗೂ ಕಾಲುದಾರಿಯಂತಹ ಅಂಡರ್ಪಾಸ್ ನಿರ್ಮಾಣವಾಯಿತು. ಪಾದಚಾರಿಗಳು, ದ್ವಿಚಕ್ರವಾಹನ, ಆಟೋಗಳು ಇಲ್ಲಿ ಓಡಾಡುವಂತಾಯಿತಲ್ಲ ಎಂದು ಜನ ನಿಟ್ಟುಸಿರುಬಿಟ್ಟರು.
ಆದರೇನು, ಈ ಇಕ್ಕಟ್ಟಿನ ಅಂಡರ್ಪಾಸ್ನಲ್ಲಿ ಎರಡು ವಾಹನ ಮುಖಾಮುಖಿ ಓಡಾಡಲು ಕಷ್ಟ. ಇಲ್ಲಿ ಟಾರು, ಕಾಂಕ್ರಿಟ್ ರಸ್ತೆ ಇಲ್ಲದೆ, ಸಣ್ಣ ವಾಹನ ಹೋದರೂ ಸೇತುವೆ ಕೆಳಗೆ ಉಸಿರು ಕಟ್ಟುವಷ್ಟು ಧೂಳು ಏಳುತ್ತದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತದೆ. ಬೆಳಕಿನ ವ್ಯವಸ್ಥೆಯಿಲ್ಲದೆ ರಾತ್ರಿ ವೇಳೆ ಹೆಂಗಸರು, ಮಕ್ಕಳು ಅಂಡರ್ಪಾಸ್ನಲ್ಲಿ ಓಡಾಡಲು ಹೆದರುತ್ತಾರೆ. ಇಲ್ಲಿ ವಿದ್ಯುತ್ ದೀಪ ಅಳವಡಿಸಿ ಎಂದು ನಗರಪಾಲಿಕೆಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ನಾಗರಾಜು ಅಸಮಾಧಾನ ತೋಡಿಕೊಂಡರು.
ಉಪ್ಪಾರಹಳ್ಳಿ, ಮೂಕಾಂಬಿಕ ನಗರ, ಚನ್ನಪ್ಪನಪಾಳ್ಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಿಯಮಿತವಾಗಿ ನೀರು ವಿತರಿಸುವುದಿಲ್ಲ ಎಂಬುದು ನಾಗರೀಕರ ದೂರು.
ಇಲ್ಲಿಗೆ ಯಾವಾಗಲೋ ಒಮ್ಮೆ ಹೇಮಾವತಿ ನೀರು ಕೊಡುತ್ತಾರೆ, ಬೋರ್ವೆಲ್ ನೀರು ತೆಗೆದು ವಿತರಿಸಬೇಕಾಗಿದೆ. ಇರುವ ಐದಾರು ಕೊಳವೆಬಾವಿಗಳಲ್ಲಿ ಎಲ್ಲಾ ಬತ್ತಿ ಹೋಗಿ ಎರಡು ಮೂರರಲ್ಲಿ ಅಲ್ಪ ಪ್ರಮಾಣದ ನೀರು ಸಿಗುತ್ತದೆ. ಅಷ್ಟನ್ನೇ ಎಲ್ಲಾ ಭಾಗಕ್ಕೂ ವಿತರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇಲ್ಲಿನ ನಗರಪಾಲಿಕೆ ಸದಸ್ಯ ಶಿವರಾಮು ಹೇಳುತ್ತಾರೆ.
ಇಲ್ಲಿ ಹೆಚ್ಚಿನ ಮನೆಗಳವರು ಸಂಪು ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ನೀರು ಸಂಗ್ರಹಿಸಲು ಸಾಧ್ಯವಾಗದೆ ಪ್ರತಿದಿನ ನೀರಿಗೆ ಬೇಡಿಕೆ ಬರುತ್ತದೆ ಎಂದರು.
ಈ ಪ್ರದೇಶದಲ್ಲಿ ಸ್ವಚ್ಚತೆ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹಲವು ಕಡೆ ರಸ್ತೆ ಬದಿ ಕಸದ ರಾಶಿ ಬಿದ್ದು ಕೊಳೆಯುತ್ತಿದೆ. ನಗರಪಾಲಿಕೆಯವರು ತೆರವು ಮಾಡುತ್ತಿಲ್ಲ, ಇದರಿಂದ ಹಂದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಬೀದಿ ನಾಯಿ ಕಚ್ಚುವ ಪ್ರಕರಣಗಳು ಇಲ್ಲಿ ನಡೆಯುತ್ತಲೇ ಇವೆ, ನಾಯಿಗಳ ಹಾವಳಿ ತಡೆಯಲು ಪಾಲಿಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಬಹುತೇಕ ಜನರ ಆಕ್ರೋಶ.
ಇಷ್ಟು ದೊಡ್ಡ ವಾರ್ಡಿಗೆ ಕೇವಲ ಎರಡು ಕಸ ಸಂಗ್ರಹಣೆ ವಾಹನ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ಎಲ್ಲಾ ರಸ್ತೆಗಳಲ್ಲೂ ಸಂಚರಿಸಿ ಮನೆಗಳಿಂದ ಕಸ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಈ ವಾರ್ಡಿಗೆ ಕೇವಲ 13 ಪೌರಕಾರ್ಮಿಕರನ್ನು ಒದಗಿಸಲಾಗಿದೆ. ಇವರಲ್ಲಿ ದಿನಾ ಇಬ್ಬರು ಮೂವರು ಅನ್ಯ ಕೆಲಸ ನಿಮಿತ್ತ ಗೈರು ಹಾಜರಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚಿಸುವುದಾಗಿ ಸದಸ್ಯ ಶಿವರಾಮು ಹೇಳಿದರು.
ಉಪ್ಪಾರಹಳ್ಳಿ ಮುಖ್ಯ ರಸ್ತೆ ಹೊರತಾಗಿ ಬಡಾವಣೆಗಳಲ್ಲಿ ವ್ಯವಸ್ಥಿತ ಸಂಪರ್ಕ ರಸ್ತೆಗಳಿಲ್ಲ. ರಸ್ತೆಗಳು ಟಾರು ಕಂಡಿಲ್ಲ, ಚರಂಡಿಗಳಿಲ್ಲ. ಇತರೆ ಬಡಾವಣೆಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸವಾಗಿಲ್ಲ. ಅಗತ್ಯವಿರುವ ಕಡೆ ಬೀದಿ ದೀಪಗಳೂ ಇಲ್ಲ. ಹೊಸ ಬಡಾವಣೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಅಧ್ವಾನ. ಕಾಲು ದಾರಿ, ಕಾಲುವೆಗಳೇ ಇಲ್ಲಿ ರಸ್ತೆ, ಚರಂಡಿ. ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಹೊಸ ಕಂಬ ಹಾಕಿಸಿಕೊಳ್ಳಬೇಕಾಗಿದೆ. ಹೀಗಿರುವಾಗ ಇಲ್ಲಿ ಇನ್ನೆಲ್ಲಿ ಬೀದಿ ದೀಪದ ವ್ಯವಸ್ಥೆ?
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ ಏಳು ವಾರ್ಡ್ಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 24ನೇ ವಾರ್ಡ್ ಅಭಿವೃದ್ಧಿಪಡಿಸಬೇಕು ಎಂದು ಶಿವರಾಮು ಒತ್ತಾಯಿಸುತ್ತಾರೆ.
ಉಪ್ಪಾರಹಳ್ಳಿ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ, ಸರಿಯಾದ ಕಟ್ಟಡವಿಲ್ಲ. ಇಲ್ಲಿನ ಉರ್ದು ಶಾಲೆಯ ಹೆಂಚಿನ ಕಟ್ಟಡ ಯಾವಾಗಬೇಕಾದರೂ ಬೀಳಬಹುದು ಎಂಬ ಸ್ಥಿತಿಯಲ್ಲಿದೆ. ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಇವೆಲ್ಲ ತಮ್ಮ ಮುಂದಿನ ಆದ್ಯತೆ. ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಿವರಾಮು ತಿಳಿಸಿದರು.
ನಗರ ಸಾರಿಗೆ ಸೇವೆ ಇದ್ದರೂ ಈ ಮಾರ್ಗದ ಯಾವ ಬಸ್ ನಿಲ್ದಾಣದಲ್ಲೂ ಬಸ್ ಶೆಲ್ಟರ್ ಇಲ್ಲ, ಇದರ ಅಗತ್ಯವಿದೆ. ನಗರಪಾಲಿಕೆ, ಇಲ್ಲವೆ ಟೂಡಾದಿಂದ ಬಸ್ಶೆಲ್ಟರ್ ನಿರ್ಮಿಸಬೇಕು. ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ, ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಒಮ್ಮೊಮ್ಮೆ ಸಿಟಿ ಬಸ್ಸು, ಶಾಲಾ ಬಸ್ಗಳು ಸಂಚರಿಸಲು ತೊಂದರೆಯಾಗುತ್ತದೆ. ಈ ರಸ್ತೆಯಲ್ಲಿ ಒಂದೊಂದು ದಿನ ಒಂದೊಂದು ಬದಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಈ ಭಾಗದಲ್ಲಿ ಜನ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ತರಕಾರಿ ಮಾರುಕಟ್ಟೆಯ ಅವಶ್ಯಕತೆ ಇದೆ. ಫ್ಲೈಓವರ್ ಕೆಳಗೆ ಮಿನಿ ಮಾರುಕಟ್ಟೆ ಸ್ಥಾಪಿಸಲು ಪಾಲಿಕೆಯ ಹಿಂದಿನ ಆಡಳಿತ ತೀಮಾನಿಸಿತ್ತು, ಅದು ಕಾರ್ಯಗತವಾಗಿಲ್ಲ. ಶೀಘ್ರವಾಗಿ ವ್ಯವಸ್ಥಿತ ಮಾರುಕಟ್ಟೆ ಆರಂಭವಾಗಬೇಕು. ಜೊತೆಗೆ ಎಲ್ಲೆಂದರಲ್ಲಿ ಮಾಂಸ ಮಾರಾಟ ಮಾಡುವುದನ್ನು ತಪ್ಪಿಸಿ, ನಿರ್ದಿಷ್ಟ ಸ್ಥಳದಲ್ಲಿ ಮಾಂಸದ ಮಾರುಕಟ್ಟೆ ಮಾಡಬೇಕಾಗಿದೆ ಎಂದು ಶಿವರಾಮು ಹೇಳಿದರು.
ಎಲ್ಲಾ ಸಮಸ್ಯೆಗಳು ಬಗೆಹರಿದು ನಾಗರಿಕರಿಗೆ ಅಗತ್ಯ ಸೌಲಭ್ಯ ಸಿಗಲಿ. ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಯೋಜನೆಗಳು ಈ ಭಾಗಕ್ಕೂ ದೊರೆಯುವಂತಾಗಲಿ ಎಂದು ಜನ ಆಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ