ಎಚ್ಚರ ವಹಿಸಿ ತೀರ್ಪು ನೀಡಲು ಸಲಹೆ

ದಾವಣಗೆರೆ:

      ಅಥ್ಲೇಟಿಕ್ ಮತ್ತು ಇತರೆ ಕ್ರೀಡೆಗಳಿಗೆ ಸಾಕಷ್ಟು ವ್ಯತ್ಯಾಸಗಳಿದ್ದು, ತೀರ್ಪುಗಾರರು ಎಚ್ಚರಿಕೆಯಿಂದ ಕ್ರೀಡೆಯನ್ನು ಗಮನಿಸಿ, ಪಾರದರ್ಶಕವಾಗಿ ತೀರ್ಪು ನೀಡುವ ಮೂಲಕ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಸಲಹೆ ನೀಡಿದರು.

      ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ 14-17ನೇ ವಯೋಮಿತಿಯ ಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಮೇಲಾಟಗಳು(ಅಥ್ಲೇಟಿಕ್ಸ್) ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಕ್ರೀಡಾ ಕ್ಷೇತ್ರದಲ್ಲಿ ಅಥ್ಲೇಟಿಕ್ಸ್ ಹಾಗೂ ಇತರೆ ಕ್ರೀಡೆಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಕ್ರೀಡಾಪಟು ಮೈಮರೆತರೆ ಕೆಲವೇ ಕ್ಷಣಗಳಲ್ಲಿ (ಸೆಕೆಂಡ್‍ಗಳಲ್ಲಿ) ಸ್ಥಾನಗಳು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆದ್ದರಿಂದ ಕ್ರೀಡಾಪಟುಗಳು ಎಚ್ಚರವಾಹಿಸಿ ನಿಗಾವಿಟ್ಟು ಆಟ ಆಡುವ ಮೂಲಕ ಉತ್ತಮ ಸಾಧನೆಗೈದು ಜಿಲ್ಲಾ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

      ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರ ಸಾಧನೆಗೆ ಸಂಬಂಧ ಪಟ್ಟ ಕ್ಷೇತ್ರಗಳಾಗಿವೆ. ಇಲ್ಲಿ ಹಳ್ಳಿ ಮಕ್ಕಳು, ಡಿಲ್ಲಿ ಮಕ್ಕಳು ಎಂಬ ತಾರತಮ್ಯ ಇರುವುದಿಲ್ಲ. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಸಾಧನೆ ಗೈಯ್ಯಬೇಕಾದರೆ, ನಿರಂತರ ಪರಿಶ್ರಮವನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

      ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ ಮಾತನಾಡಿ, ಕ್ರೀಡಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಮುಂದುಬರಬೇಕಾದರೆ, ದೈಹಿಕ ಶಿಕ್ಷಕರಿಗೆ ಒಳ್ಳೆಯ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ದೈಹಿಕ ಶಿಕ್ಷಕರಿಗೆ ಎಲ್ಲಾ ಸೌಲಭ್ಯಗಳು ಇದ್ದರೆ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಅನಾವರಣಗೊಳಿಸಿ ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುತ್ತಾರೆ. ಆದ್ದರಿಂದ ಸರ್ಕಾರ ದೈಹಿಕ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ಇತ್ತೀಚಿನ ದಿನಗಳಲ್ಲಿ ಪೌಷ್ಠಿಕಾಂಶಗಳ ಕೊರತೆಯಿಂದ ಮಕ್ಕಳು ಬಲಹೀನರಾಗುತ್ತಿದ್ದಾರೆ. ಆದ್ದರಿಂದ ಮಕ್ಕಳನ್ನು ದೈಹಿಕವಾಗಿ ಬಲಿಷ್ಠಗೊಳಿಸಲು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆ ವಿತರಿಸಬೇಕು. ಅಲ್ಲದೆ, ಕ್ರೀಡಾಪಟುಗಳಿಗೆ ಜಿಲ್ಲಾಪಂಚಾಯತ್‍ನಿಂದ ಟ್ರ್ಯಾಕ್ ಶೂಟ್, ಹ್ಯಾಟ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ