ಕುಣಿಗಲ್
ಮಾಜಿ ಮುಖ್ಯ ಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಐತಿಹಾಸಿಕ ಪ್ರಸಿದ್ದ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ದಿಢೀರ್ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯದ ರಾಜಕೀಯದ ತಿರುವು ಹಲವು ಕುತುಹಲಕ್ಕೆ ಎಡೆಮಾಡಿರುವ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಮನೆದೇವರೂ ಆದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯ ಸನ್ನಿಧಿಗೆ ತಮ್ಮ ಪುತ್ರಿ ಉಮಾದೇವಿಯೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಸನ್ನಿಧಿಯ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ ನೆರವೇರಿಸಿದ್ದು ಕ್ಷೇತ್ರದಲ್ಲಿ ಬಾರಿ ಕುತುಹಲಕ್ಕೆ ಎಡೆಮಾಡಿದೆ. ಇತ್ತೀಚೆಗೆ ಮಾದ್ಯಮಗಳಲ್ಲಿನ ಸುದ್ದಿ ನೋಡುತ್ತಿದ್ದ ಸಾರ್ವಜನಿಕರು ತಮ್ಮದೇ ಆದ ವ್ಯಾಖ್ಯಾಯನ ನೀಡುತ್ತ ಅಲ್ಲಲ್ಲಿ ಮಾತನಾಡಿಕೊಳ್ಳುತ್ತ ರಾಜ್ಯದ ರಾಜಕಾರಣದ ಬದಲಾವಣೆ ಹಿನ್ನೆಲೆಯಲ್ಲಿ ದಿಢೀರ್ ಮನೆದೇವರಿಗೆ ಬಂದಿದ್ದಾರೆ. ಇಂತಹ ಸಮಯದಲ್ಲಿಯೇ ಯಡಿಯೂರಪ್ಪ ಬಂದು ಹೋಗುವುದು ವಾಡಿಕೆ, ಇಲ್ಲದಿದ್ದರೆ ಸುಮ್ಮನೆ ಏತಕ್ಕಾಗಿ ಬರುತ್ತಿದ್ದರು ಎಂದೆಲ್ಲ ಅವರ ಅಭಿಮಾನಿಗಳು ಸೇರಿದಂತೆ ಪಕ್ಷದೊಳಗಿನವರು ಮಾತನಾಡಿಕೊಳ್ಳುತ್ತಲೇ ತಮ್ಮ ರಾಜಕೀಯ ನಾಯಕರನ್ನ ನೋಡಿ ಕಣ್ ತುಂಬಿಕೊಂಡರು. ಮಾಧ್ಯಮದವರೊಂದಿಗೆ ತುಟಿಬಿಚ್ಚದೇ ಬೆಂಗಳೂರಿನಲ್ಲಿ ಎಮರ್ಜನ್ಸಿ ಮೀಟಿಂಗ್ ಇದೆ ಎಂದು ಹೋಗೇ ಬಿಟ್ಟರು.
ಆದರೆ ಯಡಿಯೂರಪ್ಪ ಅವರು ತಮ್ಮ ಆಪ್ತ ಸಹಾಯಕ ಅರಸೀಕೆರೆಯ ಸಂತೋಷ್ ಎಂಬುವರ ವಿವಾಹ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಬಂದು ಹೋಗಿದ್ದಾರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಡೆಯೂರು ಅವರ ಮನೆದೇವರು ಅದಕ್ಕಾಗಿ ಬಂದಿದ್ದಾರೆ ಎನ್ನುತ್ತಾರೆ ಬಿಜೆಪಿಯ ರಾಜೇಶಗೌಡ.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೃಷ್ಣಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶಗೌಡ ಸೇರಿದಂತೆ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.
