ಚಿಕ್ಕನಾಯಕನಹಳ್ಳಿ
ಎದೆ ಹಾಲು ಅಮೃತಕ್ಕೆ ಸಮಾನ, ಇದು ರೋಗ ನಿರೋಧಕ ಶಕ್ತಿ ಜೊತೆಗೆ ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ವೈದ್ಯಾಧಿಕಾರಿ ರಾಧಿಕ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ, ತಾಲ್ಲೂಕು ಪಂಚಾಯ್ತಿ, ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆದ ವಿಶ್ವಸ್ತನ್ಯಪಾನ ಅರಿವು ಆಂದೋಲನ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಯ್ಯ ಮಾತನಾಡಿ, ಎದೆಹಾಲನ್ನು ಹಿಂದಿನ ಕಾಲದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ಕುಡಿಸದೆ ಚೆಲ್ಲುತ್ತಿದ್ದರು. ಇಂದಿಗೂ ಈ ಮೂಢನಂಬಿಕೆ ಹಿಂದುಳಿದ ಜಾತಿಗಳಲ್ಲಿ ನಡೆಯುತ್ತಿದೆ. ಆದ್ದರಿಂದ ತಾಯಂದಿರು ದಯವಿಟ್ಟು ಎದೆಹಾಲನ್ನು ಎಲ್ಲರೂ ಹುಟ್ಟಿದ ತಕ್ಷಣ ಕುಡಿಸಬೇಕು, ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಎಲ್ಲಾ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಮತ್ತು ರಾಧಾ ಫನಿಗಾರ್‍ರವರ ಸಾವಯವ ತರಕಾರಿ ಸಿರಿಧಾನ್ಯದ ಬಳಕೆ ಹಾಗೂ ತರಕಾರಿಗಳ ಬಗ್ಗೆ ತಿಳಿಸಿದರು. ಅಂಗನವಾಡಿ ಕೇಂದ್ರ ಹಾಗೂ ಮನೆಗಳ ಸುತ್ತಮುತ್ತ ತಾವೇ ಬೆಳೆಯಲು ತರಕಾರಿ ಬೀಜ ಹಾಗೂ ಸಾವಯವ ಗೊಬ್ಬರ ಕಿಟ್‍ಗಳನ್ನು, ನುಗ್ಗೆ, ಪಪ್ಪಾಯಿ, ಇನ್ನಿತರ ಸಸಿಗಳನ್ನು ಉಚಿತವಾಗಿ ನೀಡಲಾಯಿತು. ಅಪೌಷ್ಟಿಕ ಮಕ್ಕಳಿಗೆ ರಾಗಿ ಮಾಲ್ಟನ್ನು ಉಚಿತವಾಗಿ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ಜಗದೀಶ್, ಡಾ.ಹಿಮೇಶ್ವರ್, 39 ಅಪೌಷ್ಟಿಕ ಮಕ್ಕಳನ್ನು ಆರೋಗ್ಯ ತಪಾಸಣೆ ಮಾಡಿ ಸಲಹೆ ನೀಡಿದರು.
ಹುಳಿಯಾರಿನ ಲಕ್ಷ್ಮೀಹಾರ್ಡ್‍ವೇರ್ ಮಾಲೀಕರಾದ ರಾಜೇಶ್ವರಿ ಪ್ರಭಾಕರ್ ದಂಪತಿಗಳು ಕಾರ್ಯಕ್ರಮದಲ್ಲಿ 30 ಸೀರೆಗಳನ್ನು ಮಡಿಲು ತುಂಬುವ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ನೀಡಿದರು. 10 ಸೀರೆಗಳು ಇಲಾಖೆ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುಷ್ಪಾವತಿ ಪ್ರಾರ್ಥಿಸಿದರು. ಮಹದೇವಮ್ಮ ಸ್ವಾಗತಿಸಿದರು. ಮೇಲ್ವಿಚಾರಕಿ ಪೂರ್ಣಮ್ಮ ನಿರೂಪಿಸಿದರು. ಎಲ್.ಹೆಚ್.ವಿ ದೇವಿರಮ್ಮ, ಮೇಲ್ವಿಚಾರಕರಾದ ಅನುಸೂಯ, ಶಾರದಮ್ಮ, ಸುಜಾತ, ಎಫ್.ಡಿ.ಸಿ ದಯಾನಂದ, ಅಂಗನವಾಡಿ ಕಾರ್ಯಕರ್ತೆಯರಾದ ನಾಗಸುಂದರ, ಹೆಚ್.ಎನ್. ರೇಣುಕಮ್ಮ, ಆರ್.ರೇಣುಕಮ್ಮ, ಬಿ.ಕೆ.ಸುನಂದ, ತುಳಸಿ, ಯಶೋಧ ಮತ್ತಿತರರು ಉಪಸ್ಥಿತರಿದ್ದರು.