ಬೆಂಗಳೂರು:
ರಾಜ್ಯದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಸೇರಿ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆದಾರರಿಗೂ ಗೃಹ ಜ್ಯೋತಿ ಸಿಗಲಿದೆ. 200 ಯುನಿಟ್ ಒಳಗೆ ಉಪಯೋಗ ಮಾಡುವ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಅನ್ವಯ ಆಗುತ್ತದೆ. ಕಮರ್ಷಿಯಲ್ ಅವರಿಗೆ ಯೋಜನೆ ಅನ್ವಯ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರಾವುದೇ ವಿಷಯಗಳು ಅವರಿಗೆ ಸಿಕ್ಕಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಅವರಿಗೆ ಯಾವ ನೈತಿಕತೆ ಇದೆ ಪ್ರತಿಭಟನೆ ಮಾಡೋಕೆ?. ಬಿಜೆಪಿ ಅವರು 10 ಗಂಟೆ ವಿದ್ಯುತ್ ಕೊಡುತ್ತೇವೆಂದು ಹೇಳಿದ್ದರು, ಕೊಟ್ಟರೇ? ಸಾಲಮನ್ನಾ ಮಾಡುತ್ತೇವೆಂದು ಹೇಳಿದ್ದರು. ಮಾಡಿದರೇ? ನೀರಾವರಿಗೆ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆಂದು ಹೇಳಿದ್ದರು. ಮಾಡಿದರೇ? ಹೀಗಿರುವಾಗ ನಮ್ಮನ್ನ ಪ್ರಶ್ನೆ ಮಾಡೋಕೆ ಇವರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.