ಚಿತ್ರದುರ್ಗ:
ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಚಿತ್ರದುರ್ಗ ಜಿಲ್ಲೆ ಇನ್ನು ಬರಪೀಡಿತ ಪ್ರದೇಶವಾಗಿಯೇ ಉಳಿದುಕೊಂಡಿದೆ. ಇಲ್ಲಿಯವರೆಗೂ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿ ಪಾರ್ಲಿಮೆಂಟ್‍ಗೆ ಹೋದವರು ಚಿತ್ರದುರ್ಗ ಕ್ಷೇತ್ರದ ಅಭಿವೃದ್ದಿಯತ್ತ ತಿರುಗಿಯೂ ನೋಡಿಲ್ಲ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನನ್ನು ಜಯಶಾಲಿಯನ್ನಾಗಿ ಮಾಡಿದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಎಂ.ಕೆ.ಲೋಕೇಶ್ ವಾಗ್ದಾನ ಮಾಡಿದರು.
ಕಳೆದ ಹದಿನೈದು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ವಕೀಲನಾಗಿ ಜಿಲ್ಲೆಯ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಬರಪೀಡಿತ ಪ್ರದೇಶ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿ ನಲವತ್ತು ವರ್ಷಗಳಿಂದಲೂ ಇನ್ನು ಹೋರಾಟ ನಡೆಯುತ್ತಲೆ ಇದೆ. ಇಲ್ಲಿಯವರೆಗೂ ಆಳಿದ ಎಲ್ಲಾ ಪಕ್ಷಗಳು ಜಿಲ್ಲೆಯಲ್ಲಿನ ಸಮಸ್ಯೆಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಕ್ಷೇತ್ರದ ಮತದಾರರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿವೆ ಎಂದು ಆಪಾದಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸಣ್ಣಪುಟ್ಟ ಅಪಘಾತಗಳಾಗಿ ಸಾವು-ಬುದುಕಿನ ನಡುವೆ ಹೋರಾಟ ನಡೆಸುವವರ ಪ್ರಾಣ ಉಳಿಸಬೇಕಾದರೆ ದೂರದ ಬೆಂಗಳೂರು ಇಲ್ಲವೇ ಮಣಿಪಾಲ್‍ಗೆ ಕರೆದುಕೊಂಡು ಹೋಗಬೇಕು. ಹೃದಯಾಘಾತಕ್ಕೆ ತುತ್ತಾಗುವವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಊರಿಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವ ಘಟನೆಗಳು ಸಾಕಷ್ಟಿವೆ. ಅದಕ್ಕಾಗಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ತೆರೆಯಬೇಕೆಂಬುದು ನನ್ನ ಆಸೆ.
ಹಾಗಾಗಿ ಜನಸೇವೆ ಮಾಡುವ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ನನ್ನ ಡೈಮಂಡ್ ಗುರುತಿಗೆ ಮತ ನೀಡಿ ಜಯಶಾಲಿಯನ್ನಾಗಿಸುವಂತೆ ಕ್ಷೇತ್ರದ ಮತದಾರರಲ್ಲಿ ವಿನಂತಿಸಿದರು.
ಹೊಸದುರ್ಗ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವೇದಾವತಿ ನದಿ ನೀರು ಹರಿಯುವಾಗ ರೈತರು ಸಮೃದ್ದಿಯಾಗಿ ಬೆಳೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಕಾಲಕ್ರಮೇಣ ರಾಜಕಾರಣಿಗಳ ಹಿತಾಸಕ್ತಿಯ ಕೊರತೆಯಿಂದಾಗಿ ವೇದಾವತಿ ನದಿ ನೀರನ್ನು ತುಮಕೂರು ಜಿಲ್ಲೆಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಿರುವುದರಿಂದ ಹೊಸದುರ್ಗ ಭಾಗದ ರೈತರಿಗೆ ಅನ್ಯಾಯವಾಗಿದೆ. ಈ ಸಂಬಂಧ ಯಾವ ಜನಪ್ರತಿನಿಧಿಗಳಿಗೂ ಎಚ್ಚರಿಕೆಯಿಲ್ಲದಂತಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು, ಇದುವರೆವಿಗೂ ಯಾವ ಕೆರೆಯ ಹೂಳನ್ನು ತೆಗೆಸಿ ಅಭಿವೃದ್ದಿಪಡಿಸಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಎಂ.ಕೆ.ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕುಂಚಿಗನಾಳ್ ವಿಜಯಕುಮಾರ್, ಬಿಜೆಪಿ.ಕಾನೂನು ಮತ್ತು ಸಂಸದೀಯ ಪ್ರಕೋಷ್ಟ ವಿಭಾಗದ ತಿಪ್ಪೇಸ್ವಾಮಿ, ಪ್ರಸನ್ನ, ಡಿ.ಎಸ್.ಎಸ್.ಜಿಲ್ಲಾಧ್ಯಕ್ಷ ಗಂಜಿಗಟ್ಟೆ ಪ್ರಭಾಕರ್, ರವಿಸಿದ್ದಾರ್ಥ, ಗಿರೀಶ್ ಮಲ್ಲಾಪುರ, ಅರುಣ್, ಮಹೇಶ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.