ದಾವಣಗೆರೆ:
ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಜನ್ಮದಿನದ ಪ್ರಯುಕ್ತ ಸೆ.22ರಂದು ಸಂಜೆ 5.30ರಿಂದ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ (ಎವಿಕೆ ರಸ್ತೆಯಲ್ಲಿ) ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ನೇತೃತ್ವದಲ್ಲಿ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎ.ನಾಗರಾಜ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಜೀವ ಕೆರೆಗಳಿಗೆ ಮರುಜನ್ಮ ನೀಡಿ, ಜನರ ದಾಹ ತೀರಿಸಿದ ಆಧುನಿಕ ಭಗೀರಥ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಜನ್ಮ ದಿನದ ಪ್ರಯುಕ್ತ ಸೆ.22ರಂದು ಬೆಳಿಗ್ಗೆ ವಿನೋಬನಗರದ ಮುರುಘರಾಜೇಂದ್ರ ಶಾಲೆಯಲ್ಲಿ ರಕ್ತದಾನ ಶಿಬಿರ, ಆಶಾ ಕಿರಣ ಟ್ರಸ್ಟ್ನಲ್ಲಿ, ಬಾಡಾ ಕ್ರಾಸ್ನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೇರಿದಂತೆ ಹಲವೆಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ನಗರದಲ್ಲಿರುವ 8 ಇಂದಿರಾ ಕ್ಯಾಂಟೀನ್ಗಳ ಟೋಕನ್ಗಳನ್ನು ಖರೀದಿಸಿ, ಅಲ್ಲಿಗೆ ಬರುವ ಸಾರ್ವಜನಿಕರಿಗೆ ಉಚಿತ ಟೋಕನ್ ವಿತರಿಸುವ ಮೂಲಕ ಉಪಹಾರ ಮತ್ತು ಊಟ ಕೊಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಜೆ 5.30ಕ್ಕೆ ಅಕ್ಕಮಹಾದೇವಿ ರಸ್ತೆಯಲ್ಲಿ ನಡೆಯುವ ಸ್ಟ್ರೀಟ್ ಫೆಸ್ಟಿವಲ್ನ ಪ್ರಯುಕ್ತ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಯಕ್ಷಗಾನ ಕಲಾವಿದರು ಸೇರಿದಂತೆ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ. ರಸ ಮಂಜರಿ ಕಾರ್ಯಕ್ರಮ, ಫುಡ್ ಫೆಸ್ಟ್ ಹಾಗೂ ಮ್ಯೂಜಿಕಲ್ ನೈಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನರ ಮನಸ್ಸು ಸೂರೆಗೊಳ್ಳಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜೆಂಬಗಿ ರಾಧೇಶ್, ಶ್ರೀಕಾಂತ್ ಬಗೇರಾ, ಯುವರಾಜ್, ಪರಸಪ್ಪ ತೆರದಾಳ್, ಪ್ರದೀಪ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ