IPL 2025:

ಇಂಡಿಯನ್ ಪ್ರೀಮಿಯರ್ ಲೀಗ್ನ 43ನೇ ಪಂದ್ಯದ ವೇಳೆ ಕಾಣಿಸಿಕೊಂಡ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿ ಕಾವ್ಯ ಮಾರನ್ (Kavya Maran) ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗೆ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಕಾವ್ಯ ಬ್ಯಾಟರ್ ಮೇಲೆ ಕೋಪಗೊಂಡಿರುವುದು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸಿಎಸ್ಕೆ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.5 ಓವರ್ಗಳಲ್ಲಿ 154 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಪರ ಕಮಿಂಡು ಮೆಂಡಿಸ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.
ಎಚ್ಚರಿಕೆಯೊಂದಿಗೆ ಬ್ಯಾಟಿಂಗ್ ಪ್ರದರ್ಶಿಸಿದ ಕಮಿಂದು ಮೆಂಡಿಸ್ಗೆ 16ನೇ ಓವರ್ನಲ್ಲಿ ಫ್ರೀ ಹಿಟ್ ಲಭಿಸಿದೆ. ನೂರ್ ಅಹ್ಮದ್ ಎಸೆದ 16ನೇ ಓವರ್ನ 3ನೇ ಎಸೆತವು ಲೈ ನೋಬಾಲ್ ಆಗಿತ್ತು. ಹೀಗಾಗಿ ಅಂಪೈರ್ ಫ್ರೀ ಹಿಟ್ ಕರೆದರು. ಆದರೆ ಫ್ರೀ ಹಿಟ್ನಲ್ಲಿ ಕಮಿಂದುಗೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ.
ಇತ್ತ ಕಮಿಂದು ಮೆಂಡಿಸ್ ಫ್ರೀ ಹಿಟ್ ಎಸೆತವನ್ನು ತಪ್ಪಿಸಿಕೊಳ್ಳುತ್ತಿದ್ದಂತೆ ಅತ್ತ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಕೋಪಗೊಂಡು ಕೈ ತೋರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಎಸ್ಆರ್ಹೆಚ್ ಓನರ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೀಡಿದ 155 ರನ್ಗಳ ಸುಲಭ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಪರ ಎಡಗೈ ದಾಂಡಿಗ ಕಮಿಂದು ಮೆಂಡಿಸ್ 22 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅಜೇಯ 32 ರನ್ ಬಾರಿಸಿದರು. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 2 ಫೋರ್ಗಳೊಂದಿಗೆ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 18.4 ಓವರ್ಗಳಲ್ಲಿ ಗುರಿ ಮುಟ್ಟಿಸಿ 5 ವಿಕೆಟ್ಗಳ ಜಯ ತಂದುಕೊಟ್ಟಿದ್ದಾರೆ.
ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಅಲ್ಲದೆ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅತ್ತ ಎಸ್ಆರ್ಹೆಚ್ ವಿರುದ್ಧ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿದೆ.
