ಭೋಪಾಲ್:
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಆಪ್ತ ಸಹಾಯಕರಾದ ಪ್ರವೀಣ್ ಕಕ್ಕರ್ ಮತ್ತು ಆರ್.ಕೆ ಮಿಗ್ಲಾನಿ ಅವರಿಗೆ ಸೇರಿದ ಮನೆ, ಕಚೇರಿಗಳ ಸಹಿತ ದೇಶದ 50 ಕಡೆಗಳಲ್ಲಿ ಐಟಿ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ ಮೊದಲು ವ್ಯಾಪಕ ಹಣ ಸಾಗಾಟ, ಹಂಚಿಕೆಗೆ ಸಿದ್ಧತೆ ನಡೆದಿದೆ ಎಂಬ ದೂರಿನ ಮೇರೆಗೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರ ಹಣ ಹಂಚಿಕೆ ಹುನ್ನಾರಗಳನ್ನು ತಡೆಯಲು ಆದಾಯ ತೆರಿಗೆ ಅಧಿಕಾರಿಗಳು ಬೆಳಗಿನ ಜಾವದಲ್ಲೇ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ಸ್ಥಳಗಳಿಂದ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಿನ ಜಾವ 3 ಗಂಟೆಗೆ ಐಟಿ ಅಧಿಕಾರಿಗಳ ತಂಡ ಸಿಆರ್‌ಪಿಎಫ್ ಜವಾನರ ಭದ್ರತೆಯೊಂದಿಗೆ ದಾಳಿ ಆರಂಭಿಸಿತು ಎಂದು ಮೂಲಗಳು ಹೇಳಿವೆ.