ಐದು ವರ್ಷದಲ್ಲಿ ಮಾಡಿದ ಕೆಲಸ ಸಾರ್ಥಕತೆ ಮೂಡಿಸಿದೆ : ಎಸ್‍ಪಿಎಂ

ತುಮಕೂರು

     ಸಂಸದನಾಗಿ ತಮ್ಮ ಐದು ವರ್ಷದ ಅವಧಿಯಲ್ಲಿ ಮಾಡಿದ ಕೆಲಸ ಸಂಪೂರ್ಣ ತೃಪ್ತಿ ಇದೆ, ಇನ್ನಷ್ಟು ಮಾಡಬೇಕಾಗಿತ್ತು, ಮಾಡಲಾಗಲಿಲ್ಲವಲ್ಲ ಎಂಬ ನಿರಾಶೆಯೂ ಇದೆ. ಆದರೂ ಅವಕಾಶ ಸಿಕ್ಕಷ್ಟನ್ನು ಮಾಡಲು ಸಾಧ್ಯವಾಗಿದ್ದಕ್ಕೆ ಸಾರ್ಥಕ ಮನೋಭಾವ ಮೂಡಿದೆ.

     ಮುಂದೆ ತಮ್ಮ ಹೊಸ ಇನ್ನಿಂಗ್ಸ್ ಆರಂಭವಾಗಲಿದ್ದು, ಸಕ್ರಿಯ ರಾಜಕಾರಣದಲ್ಲಿ ಮುಂದುವರೆದು ತುಮಕೂರು ಜಿಲ್ಲೆಯ ಜನರ ಒಡನಾಟದಲ್ಲಿರುತ್ತೇನೆ. ಸಂಸದನಾಗಿ ತಾವು ಪಾರದರ್ಶಕವಾಗಿದ್ದು ಸಾರ್ವಜನಿಕ ಬದುಕಿನಲ್ಲಿ ಮುಜುಗರ ಪಡುವಂತಾದ್ದೇನೂ ಆಗಿಲ್ಲ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಹೇಳಿದರು.

      ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ವಂಚಿತರಾಗಿ ಸ್ಪರ್ಧೆ ಮಾಡುವ ಅವಕಾಶ ಕಳೆದುಕೊಂಡು ನಿರಾಶರಾಗಿರುವ ಮುದ್ದಹನುಮೇಗೌಡರು, ಚುನಾವಣೆ ಫಲಿತಾಂಶ ಪ್ರಕಟವಾಗುವ ಎರಡು ದಿನ ಮೊದಲು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಐದು ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿ, ಸಹಕರಿಸಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದರು.

     ಕಳೇದ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೇವಲ 44 ಸ್ಥಾನ ಗೆದ್ದಿತ್ತು ಆ ವೇಳೆ ತುಮಕೂರು ಕ್ಷೇತ್ರದ ಮತದಾರರು ತಮ್ಮನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದರು. ತಾವೂ ಸಂಸದರಾಗಿ, ಒಬ್ಬ ಸಂಸದ ಯಾವ ರೀತಿ ಕೆಲಸ ಮಾಡಬಹುದು ಎಂಬ ಟ್ರೆಂಡ್‍ಸೆಟ್ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದೆ, ಜನರ ಜೊತೆ ಸ್ಪಂದಿಸಿದೆ. ಕ್ಷೇತ್ರ ಹಾಗೂ ರಾಜ್ಯ, ದೇಶದ ಗಂಭೀರ ವಿಚಾರಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಸಂಸದ ಸ್ಥಾನಕ್ಕೆ ಗೌರವ ತರುವ ಪ್ರಯತ್ನ ಮಾಡಿದ್ದೆ. ಈ ಬಗ್ಗೆ ತಮಗೆ ಸಮಾಧಾನ, ಸಾರ್ಥಕತೆ ಮೂಡಿದೆ ಎಂದರು.

      ತುಮಕೂರಿನ ಹೆಚ್ಚೆಂಟಿ ಕಾರ್ಖಾನೆಗೆ ಮುಚ್ಚುವ ಅನಿವಾರ್ಯ ಸ್ಥಿತಿ ಬಂದಾಗ, ಆ ಜಾಗಕ್ಕೆ ಮಹತ್ತರ ಯೋಜನೆ ತರಬೇಕು ಎಂಬ ಪ್ರಯತ್ನವಾಗಿ ಜಗತ್ತಿನಲ್ಲೇ ಖ್ಯಾತಿ ಪಡೆದ ಇಸ್ರೋವನ್ನು ತುಮಕೂರಿನಲ್ಲಿ ಸ್ಥಾಪಿಸಲು ಕಾಳಜಿಯ ಪ್ರಯತ್ನ ಮಾಡಿದ್ದೆ. ಈಗ ಇಸ್ರೋ ಸಂಸ್ಥೆಯ ಕಟ್ಟಡ ನಿರ್ಮಾಣ ಕೆಲಸ ನಡೆದಿದೆ. ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಕೆಲಸ ಆರಂಭವಾಗಿದೆ. ತುಮಕೂರಿನಲ್ಲಿ ಪಾಸ್‍ಪೋರ್ಟ್ ಕೇಂದ್ರ ಸ್ಥಾಪನೆಗೆ ತಮ್ಮ ಅವಧಿಯಲ್ಲಿ ಸಾಧ್ಯವಾಯಿತು. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ವೇಗ ಪಡೆದುಕೊಳ್ಳಲು ಶ್ರಮಿಸಿದ್ದೆ ಎಂದು ಮುದ್ದಹನುಮೇಗೌಡರು ನೆನಪು ಮಾಡಿಕೊಂಡರು.

    ಕ್ಷೇತ್ರದ ಜನ ಕೊಟ್ಟ ಅವಕಾಶವನ್ನು ತಮ್ಮ ನಿರೀಕ್ಷೆ ಮೀರಿ ಸದುಪಯೋಗಪಡಿಸಿಕೊಂಡೆ. ಮುಂದೆ ಯಾರೇ ಗೆಲ್ಲಲಿ ಅವರು ಈ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲಿ, ಮತ್ತಷ್ಟು ಯೋಜನೆಗಳನ್ನು ಜಿಲ್ಲೆಗೆ ತರಲಿ ಎಂದು ಆಶಿಸಿದರು. ಜಿಲ್ಲೆಯ ಜನ ತಮ್ಮ ಬಗ್ಗೆ ತೋರಿದ ಪ್ರೀತಿ, ಅನುಕಂಪ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ, ಮುಂದೆಯೂ ಜಿಲ್ಲೆಯ ಜನರೊಂದಿಗೆ ಸ್ಪಂದಿಸಿ, ಸಕ್ರೀಯ ರಾಜಕಾರಣದಲ್ಲಿರುವೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದಿರುವುದು ದುರಾದೃಷ್ಟ, ಅದೊಂದು ತಮ್ಮ ಪಾಲಿನ ದುರಂತ ಎಂದು ಸಂಕಟ ವ್ಯಕ್ತಪಡಿಸಿದ ಮುದ್ದಹನುಮೇಗೌಡರು, ನಿರಾಶರಾಗದೆ ಮುಂದೆಯೂ ಜನರೊಂದಿಗೆ ಇರುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap