ಮುಂಬೈ:
ಯುವಕನೊಬ್ಬ ತನ್ನ ತಂದೆ ದುಬಾರಿ ಬೆಲೆಯ ಐಫೋನ್ ಕೊಡಿಸಲು ನಿರಾಕರಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕಾಮೋಥೆ ಪ್ರದೇಶದ ನಿವಾಸಿ ಸಂಜಯ್ ವರ್ಮಾ(18) ಸೋಮವಾರ ತಡರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುವಕನ ತಂದೆ ನೀಡಿದ ದೂರಿನ ಪ್ರಕಾರ, ತಮ್ಮ ಮಗ ಸುಮಾರು 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಕೊಡಿಸುವಂತೆ ಕೇಳಿಕೊಂಡಿದ್ದನು. ಆದರೆ ಅವರು ಕಡಿಮೆ ಬೆಲೆಯ Vivo ಫೋನ್ ಕೊಡಿಸಿದ್ದಾರೆ. ಇದರಿಂದ ಖಿನ್ನತೆಗೆ ಒಳಗಾಗಿದ್ದು, ಜುಲೈ 8 ರಂದು ರಾತ್ರಿ 11.30 ರ ಸುಮಾರಿಗೆ ಸಂಜಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಶವಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.