ಐಷರಾಮಿ ಬದುಕಿಗೆ ಹಳ್ಳಿ ತೊರೆಯುವುದು ತರವಲ್ಲ

ಚಿತ್ರದುರ್ಗ:

      ಆಧುನಿಕ ಜಗತ್ತಿನಲ್ಲಿ ಐಷಾರಾಮಿ ಜೀವನಕ್ಕೆ ಆಸೆಪಟ್ಟು ಯುವಕರು ಹಳ್ಳಿಗಳನ್ನು ತೊರೆದು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಹೋಗುತ್ತಿರುವುದನ್ನು ತಡೆಗಟ್ಟಬೇಕಾದರೆ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಸ್ವಾವಲಂಭಿಗಳನ್ನಾಗಿ ಮಾಡಬೇಕಿದೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

      ದೇವರಾಜ ಅರಸು ಐ.ಟಿ.ಐ.ಕಾಲೇಜು ಹೊಳಲ್ಕೆರೆ ಹಾಗೂ ಗುರುಕುಲ ಸಂಸ್ಥೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಹೆಚ್.ಡಿ.ಪುರ ಶ್ರೀಲಕ್ಷ್ಮಿನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಚಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

      ಕೆಲಸದ ಆಸೆಗಾಗಿ ಯುವಕರು ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರುತ್ತಿರುವುದರಿಂದ ಹಳ್ಳಿಗಳು ವೃದ್ದರ ತಾಣಗಳಾಗುತ್ತಿವೆ. ರಾಷ್ಟ್ರಪಿತ ಮಹಾತ್ಮಗಾಂಧಿರವರ ಕನಸನ್ನು ನನಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರತಗಳು ಅನೇಕ ಕೌಶಲ್ಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರ ಸದುಪಯೋಗಪಡೆದುಕೊಂಡು ಸ್ವ ಉದ್ಯೋಗಿಗಳಾಗಿ ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಬದುಕು ನಿಜವಾಗಿಯೂ ಅರ್ಥಪೂರ್ಣವಾಗುತ್ತದೆ ಎಂದು ಯುವ ಪೀಳಿಗೆಗೆ ಸಂಸದ ಬಿ.ಎನ್.ಚಂದ್ರಪ್ಪ ಕರೆ ನೀಡಿದರು.

      ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟವರು. ವಿದ್ಯಾರ್ಥಿಗಳ ಹಾಗೂ ಯುವಕ/ಯುವತಿಯರ ಬಾಳು ಹಸನಾಗಬೇಕಾದರೆ ಪ್ರತಿಯೊಬ್ಬರು ದುಡಿದು ತಿನ್ನಬೇಕು. ಸೋಮಾರಿಗಳಾಗಿದ್ದರೆ ಮನಸ್ಸು ಕೆಟ್ಟ ಆಲೋಚನೆಗಳತ್ತ ವಾಲುತ್ತದೆ. ಮತ್ತೊಬ್ಬರ ಮೇಲೆ ಅವಲಂಭಿಸಿ ಯಾರು ಜೀವನ ಮಾಡಬಾರದು. ವಿವಿಧ ಸಂಘ ಸಂಸ್ಥೆಗಳು, ಎನ್.ಜಿ.ಓ.ಗಳು ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿದರೆ ಇಂತಹ ಕೌಶಲ್ಯ ತರಬೇತಿಗಳು ಯಶಸ್ವಿಯಾಗಲಿದೆ ಎಂದರು.

      ಚುನಾವಣೆಯಲ್ಲಿ ಗೆಲುವು-ಸೋಲು ಇದ್ದೇ ಇರುತ್ತದೆ. ಗೆಲ್ಲಬೇಕಾದವರು ಸೋಲುತ್ತಾರೆ. ಸೋಲಬೇಕಾದವರು ಗೆಲ್ಲುತ್ತಾರೆ. ಚುನಾವಣೆಯ ನಂತರ ಪಕ್ಷ ಬೇಧವಿಲ್ಲದೆ ಸರ್ಕಾರದ ಕಾರ್ಯಕ್ರಮಗಳು ಸಫಲವಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನನ್ನ ಅನುದಾನದಲ್ಲಿ ಹಣ ಕಡಿಮೆಯಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿ ದೊಡ್ಡದು. ಎಲ್ಲಾ ಕಡೆ ಹಣ ಕೊಡುವುದು ಕಷ್ಟವಾಗುತ್ತದೆ. ಆದರೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದೇನೆ. ವಿದ್ಯಾರ್ಥಿಗಳು ಶುದ್ದವಾದ ನೀರು ಕುಡಿಯಬೇಕು.

      ನಿಮ್ಮ ನಿಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸುವಂತೆ ದೊಡ್ಡವರ ಮನವೊಲಿಸಿ. ಶಿಕ್ಷಣದ ಜೊತೆ ಆರೋಗ್ಯದ ಕಡೆಗೂ ಗಮನ ಕೊಡಿ. ಸರ್ಕಾರಿ ನೌಕರಿಗಾಗಿಯೇ ಯಾರು ಓದಬಾರದು. ಜ್ಞಾನಾರ್ಜನೆಗಾಗಿ ಶಿಕ್ಷಣವಂತರಾಗಿ ಎಂದು ಹೇಳಿದ ಸಂಸದರು ಹೆಚ್.ಡಿ.ಪುರ ಗ್ರಾಮಕ್ಕೆ ನೀರು ಪೂರೈಸಲು ಟ್ಯಾಂಕರ್ ಮತ್ತು ಟ್ರಾಕ್ಟರ್ ನೀಡಿದ್ದೇನೆ ಎಂದರು.

      ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಮಾತನಾಡುತ್ತ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವನ್ನು ಹೋಗಲಾಡಿಸಬೇಕಾಗಿರುವುದರಿಂದ ಯುವಕ/ಯುವತಿಯರಿಗೆ ಉದ್ಯೋಗಾವಕಾಶ ಒದಗಿಸಿ ಸ್ವ-ಉದ್ಯೋಗಿಗಳನ್ನಾಗಿಸುವುದು ಬೃಹತ್ ಉದ್ಯೋಗ ಮೇಳದ ಉದ್ದೇಶ ಎಂದು ಹೇಳಿದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ.

      ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟ. ಅದಕ್ಕಾಗಿ ಸ್ವಾವಲಂಭಿಗಳಾಗುವುದನ್ನು ತರಬೇತಿಯ ಮೂಲಕ ಕಲಿಯಬೇಕು. ಯಾವುದೇ ಒಂದು ಸಂಸ್ಥೆಯನ್ನು ಆರಂಭಿಸುವುದು ಸುಲಭವಲ್ಲ. ಆರ್ಥಿಕ ಸಮಸ್ಯೆ ಕಾಡುವುದು ಸಜಹ. ಹಾಗಾಗಿ ಇರುವ ಸಂಪನ್ಮೂಲವನ್ನು ಬಳಸಿಕೊಂಡು ಉಚಿತ ಕೌಶಲ್ಯ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

       ಎಸ್.ಎಲ್.ಎನ್. ಟ್ರಸ್ಟ್ ಅಧ್ಯಕ್ಷ ಹೆಚ್.ಡಿ.ರಂಗಯ್ಯ ಮಾತನಾಡಿ ನಿರುದ್ಯೋಗಿಗಳಿಗೆ ಕೆಲಸ ಕೊಡುವುದು ನಿಜವಾಗಿಯೂ ಅತ್ಯುಪಯುಕ್ತವಾದುದು. ಹಳ್ಳಿಗಾಡಿನಲ್ಲಿ ಮಕ್ಕಳ ಜೀವನ ಮಟ್ಟ ಸುಧಾರಣೆಯಾಗಬೇಕಾಗಿರುವುರಿಂದ ಇಂತಹ ಕೌಶಲ್ಯ ತರಬೇತಿಗಳು ಬೇಕು ಎಂದು ಸಲಹೆ ನೀಡಿದರು.

      ಗುರುಕುಲ ಸಂಸ್ಥೆಯ ಕೃಷ್ಣಮೂರ್ತಿ ಮಾತನಾಡುತ್ತ 2015 ರಲ್ಲಿ ಆರಂಭಗೊಂಡ ಗುರುಕುಲ ಸಂಸ್ಥೆಯಿಂದ ಇದುವರೆವಿಗೂ ವಿವಿಧ ತರಬೇತಿಗಳನ್ನು ನೀಡಿ ಏಳುಸಾವಿರ ನಿರುದ್ಯೋಗಿಗಳಿಗೆ ಕೆಲಸ ಕೊಡಿಸಿದ್ದೇವೆ. ಎಲ್ಲರೂ ಮನೆಬಾಗಿಲಿಗೆ ಕೆಲಸ ಬೇಕೆಂದು ಆಸೆಪಡುವುದರಿಂದ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಕೇವಲ ಪದವಿ ಪಡೆದು ಮನೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಓದಿಗೆ ತಕ್ಕಂತೆ ತರಬೇತಿ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

       ಗುರುಕುಲ ಸಂಸ್ಥೆ ಸೌತ್ ಕರ್ನಾಟಕ ಟೀಂ ಮ್ಯಾನೇಜರ್ ಅಜೇಶ್, ತಾ.ಪಂ.ಸದಸ್ಯ ಕೆ.ಮೂಡಲಗಿರಿಯಪ್ಪ, ಹೊಳಲ್ಕೆರೆ ಎ.ಪಿ.ಎಂ.ಸಿ.ಅಧ್ಯಕ್ಷ ಅಂಕಳಪ್ಪ, ಹೆಚ್.ಡಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಪ್ಪ, ಟಿ.ನುಲೇನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಯಪ್ಪ, ಸಿ.ಹೆಚ್.ಗೌಡ್ರು, ಸಿರಿಯಪ್ಪ, ಶ್ರೀನಿವಾಸ್, ಸಣ್ಣಸಿದ್ದಪ್ಪ, ಶೇಷಣ್ಣ, ಚಂದ್ರಯ್ಯ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಎಲ್.ಐ.ಸಿ.ಈರಣ್ಣ ಪ್ರಾರ್ಥಿಸಿದರು. ಜಯಣ್ಣ ಸ್ವಾಗತಿಸಿ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link