ನವದೆಹಲಿ:
ಉಗ್ರರ ತವರು ಎಂದೇ ಕುಖ್ಯಾತವಾಗಿರುವ ಪಾಕಿಸ್ಥಾನದಲ್ಲಿ ನಾಗರಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿ ಯಾಗಿದ್ದು, ದೇಶ ಬಹುತೇಕ ದಿವಾಳಿಯಾಗಿದ್ದು .ತನ್ನ ದೇಶವನ್ನು ಉಳಿಸಿಕೊಳ್ಳಲು ಆರ್ಥಿಕ ನೆರವಿಗಾಗಿ ಯಾವ ದೇಶದ ಮುಂದೆ ನಿಂತು ಅಂಗಲಾಚಿದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ .ಹೀಗಿರುವಾಗ ಪಾಕಿಸ್ತಾನಕ್ಕೆ ಆಶಾಕಿರಣವಾಗಿ ಬಂದದ್ದು ಐ ಎಂ ಎಫ್ .
ಐ ಎಂ ಎಫ್ ಏನು ಸುಮ್ಮನೆ ಸಹಾಯ ಹಸ್ತ ಚಾಚಿಲ್ಲ ಕಠಿಣ ಷರತ್ತುಗಳನ್ನು ಹಾಕಿದ್ದು ಇವಕ್ಕೆಲ್ಲ ಒಪ್ಪಿಕೊಂಡು ಅದನ್ನು ತತ್‌ಕ್ಷಣದಿಂದ ಜಾರಿಗೆ ತಂದದ್ದೇ ಆದಲ್ಲಿ ಸಾಲ ನೀಡುವುದಾಗಿ ಪಾಕಿಸ್ಥಾನ ಸರಕಾರಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಸದ್ಯಕ್ಕಂತೂ ಹಾಲಿ ಬಿಕ್ಕಟ್ಟಿನಿಂದ ಪಾರಾದರೆ ಸಾಕು ಎಂಬ ಮನಃಸ್ಥಿತಿಯಲ್ಲಿರುವ ಪಾಕ್ ಸರಕಾರ ಅನ್ಯಮಾರ್ಗವಿಲ್ಲದೆ ಐಎಂಎಫ್ ನ ಎಲ್ಲ ಷರತ್ತುಗಳಿಗೆ ಸಮ್ಮತಿಯನ್ನು ಸೂಚಿಸುವ ಇಂಗಿತ ವ್ಯಕ್ತಪಡಿಸಿದ್ದು ತನ್ಮೂಲಕ ಐಎಂಎಫ್ ಮುಂದೆ ಮಂಡಿಯೂರಿದೆ.
ಕಳೆದೊಂದು ದಶಕದಿಂದೀಚೆಗೆ ಪಾಕಿಸ್ಥಾನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. ಇದರ ಹೊರತಾಗಿಯೂ ಚೀನ ಸಹಿತ ತನ್ನ ಕೆಲವೊಂದು ಆಪ್ತ ರಾಷ್ಟ್ರಗಳ ನೆರವಿನಿಂದ ಏದುಸಿರು ಬಿಡುತ್ತ ದಿನದೂಡುತ್ತಲೇ ಬಂದಿದ್ದ ಪಾಕಿಸ್ಥಾನ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಝ ರಿತವಾಗಿದೆ.
ಜನರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿರುವಂತೆಯೇ ಪಾಕಿಸ್ಥಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ದೇಶವನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಹೆಣಗಾಡುತ್ತಿದ್ದಾರೆ. ಈ ಹಿಂದೆ ಸದಾ ತನ್ನ ಬೆಂಗಾವಲಿಗೆ ನಿಲ್ಲುತ್ತಿದ್ದ ಚೀನ ಸಹಿತ ಪಾಕ್‌ನ ಪರಮಾಪ್ತ ರಾಷ್ಟ್ರಗಳು ಇದೀಗ ನಡುನೀರಿನಲ್ಲಿ ಕೈಬಿಟ್ಟಿವೆ.
ವಿದ್ಯುತ್, ತೈಲ, ಆಹಾರ, ಇಂಧನ ಸಹಿತ ಪ್ರತಿಯೊಂದೂ ಸೇವೆ ಮತ್ತು ವಸ್ತುಗಳ ಬೆಲೆ ಭಾರೀ ಏರಿಕೆಯನ್ನು ಕಂಡಿದೆ. ದೇಶದಲ್ಲಿನ ಹಣದುಬ್ಬರ ಸರಿಸುಮಾರು 5 ದಶಕಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಇನ್ನು ಬಾಹ್ಯ ಸಾಲ ಮರುಪಾವತಿಗೆ ಪರದಾಡುತ್ತಿರುವ ಪಾಕ್‌ನಲ್ಲಿನ ವಿದೇಶಿ ವಿನಿಮಯ ಮೀಸಲು 3.1 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದ್ದು ಸದ್ಯದ ಸ್ಥಿತಿಯಲ್ಲಿ ಇದು ಮೂರು ವಾರಗಳಲ್ಲಿಯೇ ಮುಗಿಯಲಿದೆ. ಇದೇ ವೇಳೆ ದೇಶದಲ್ಲಿ ರಾಜಕೀಯ ಅಸ್ಥಿರತೆ, ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಅಲ್ಲಿನ ಸರಕಾರವನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ.
